ಬೀದರ: ಜಾಗತಿಕವಾಗಿ ತಲ್ಲಣ್ಣ ಮೂಡಿಸಿರುವ ಕೋವಿಡ್-19 ಮುಕ್ತಿಗಾಗಿ ಹಲವು ಸಂಶೋಧನೆಗಳ ಬಳಿಕ ಲಸಿಕೆ ಲಭ್ಯವಾಗಿದೆ. ಆದರೆ, ಮೊದಲ ಹಂತದ ಕೊರೊನಾ ಲಸಿಕೆ ಮಹಾ ಅಭಿಯಾನಕ್ಕೆ ಹಿನ್ನಡೆಯಾಗಿದ್ದು, ಗಡಿ ಜಿಲ್ಲೆಯಲ್ಲಿ ಶೇ.50 ಆರೋಗ್ಯ ಕಾರ್ಯಕರ್ತರು ಮಾತ್ರ ವ್ಯಾಕ್ಸಿನ್ ಪಡೆದಿದ್ದಾರೆ. ಇದಕ್ಕೆ ಲಸಿಕೆ ಕುರಿತಾಗಿ ನಂಬಿಕೆ ಇಲ್ಲದಿರವುದು ಮತ್ತು ಅಡ್ಡ ಪರಿಣಾಮಗಳ ಅಪಪ್ರಚಾರ ಕಾರಣ.
ಬಹು ನಿರೀಕ್ಷೆ ಹೆಚ್ಚಿಸಿದ್ದ ಕೋವಿಡ್ ಲಸಿಕೆ ಹಂಚಿಕೆಗೂ ಮೊದಲಿದ್ದ ಲೆಕ್ಕಾಚಾರಗಳು ಬುಡ ಮೇಲಾಗಿದೆ. ದೇಶದ ಇತರೆಡೆಯಂತೆ ಜಿಲ್ಲೆಯಲ್ಲೂ ಕೊರೊನಾ ಲಸಿಕೆ ವಿತರಣೆಆರಂಭವಾಗಿ 12 ದಿನಗಳು ಕಳೆದಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ 5 ಜನರಲ್ಲಿ ತಲೆ ನೋವು, ಸುಸ್ತು ಹೊರತುಪಡಿಸಿ ಲಸಿಕೆಯಿಂದ ದೊಡ್ಡಮಟ್ಟದ ಅನಾಹುತವೇನೂ ಸಂಭವಿಸಿಲ್ಲವಾದರೂ ಲಸಿಕೆ ಪಡೆಯಲು ಈ ಮೊದಲು ಹೆಸರು ನೋಂದಾಯಿಸಿಕೊಂಡಿದ್ದ ಕೋವಿಡ್ ವಾರಿಯರ್ಸ್‌ಗಳೇ ಕೊನೆ ಕ್ಷಣದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಲಸಿಕೆ ಮಹಾ ಅಭಿಯಾನದ ಪ್ರಥಮ ಹಂತದಡಿ 10,984 ವಾರಿಯರ್ ನೋಂದಣಿ ಮಾಡಿಕೊಂಡಿದ್ದಾರೆ.
ಮೊದಲು ಆರೋಗ್ಯ ಕಾರ್ಯಕರ್ತರಿಗೆ, ನಂತರ ಪೊಲೀಸ್ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತರಿಗೆ ಲಸಿಕೆ ನೀಡುವುದು, ಜ.30ರವರೆಗೆ ನಿಗದಿತ ಗುರಿ ಸಾ ಧಿಸುವ ಕುರಿತು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಆದರೆ, ಇದುವರೆಗೆ ಜಿಲ್ಲೆಯಲ್ಲಿ 5400 ಫಲಾನುಭವಿಗಳು ಮಾತ್ರ “ಕೋವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು, ಆಶಾ ಸಿಬ್ಬಂದಿ ವ್ಯಾಕ್ಸಿನ್ ಪಡೆಯಲು ಮುಂದೆ ಬಂದರೆ, ಖಾಸಗಿ ಆರೋಗ್ಯ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಹಿಂಜರಿಯುತ್ತಿರುವುದು ಅಭಿಯಾನ ಹಿನ್ನಡೆಗೆ ಕಾರಣವಾಗಿದೆ.
ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿ ಸಣ್ಣ ಪುಟ್ಟ ಅಡ್ಡ ಪರಿಣಾಮಗಳು ಬಿಟ್ಟರೆ ತೀವ್ರ ಅನಾಹುತಗಳು ಬರುವುದಿಲ್ಲ ಎಂಬ ಅನುಭವ ಹಂಚಿಕೊಂಡಿದ್ದಾರೆ. ಆದರೂ, ಬಹುತೇಕ ಕೇಂದ್ರಗಳಲ್ಲಿ ವೈದ್ಯರೇ ಹಿಂದೇಟು ಹಾಕುತ್ತಿದ್ದಾರೆ. ದೇಶೀಯ ಲಸಿಕೆ ಕೊನೆ ಹಂತದ ಪ್ರಯೋಗ ಪೂರ್ಣಗೊಳಿಸಿಲ್ಲ, ಇದರಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಸುದ್ದಿಗಳು ವಾರಿಯರ್ ಗಳಲ್ಲಿ ಲಸಿಕೆ ಕುರಿತಾಗಿ ಭಯ ಇದೆ. ಹೀಗಾಗಿ ಮುಂದೆ ತೆಗೆದುಕೊಳ್ಳೋಣಎಂದು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಇದನ್ನೂ ಓದಿ:ಚಿತ್ತಾಪುರ ಪೊಲೀಸರಿಂದ ಜನಜಾಗೃತಿ ಜಾಥಾ
ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಕೋವಿಡ್ ವಾರಿಯರ್‌ಗಳಲ್ಲಿ ಲಸಿಕೆ ಸುರಕ್ಷತೆ ಮತ್ತು ಅಗತ್ಯತೆ ಕುರಿತು ಭರವಸೆ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಇನ್ನೂ ಪ್ರಥಮ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ 28 ದಿನಗಳ ನಂತರ 2ನೇ ಡೋಸ್ ಕೋವಿಡ್ ಲಸಿಕೆ ನೀಡಬೇಕಿರುವುದರಿಂದ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಫೆ.1ರಿಂದ ಮೂರು ದಿನಗಳವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಬಳಿಕ ಮತ್ತೆ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ.
ಶಶಿಕಾಂತ ಬಂಬುಳಗೆ