ಢಾಕಾ: ಜಾಗತಿಕ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ಥಾನ ನಿರೀಕ್ಷೆಗೂ ಮೀರಿದ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. ರಶೀದ್ ಖಾನ್ ಅವರ ನಾಯಕತ್ವದಲ್ಲಿ ಇತ್ತೀಚೆಗಷ್ಟೇ ಬಾಂಗ್ಲಾದೇಶವನ್ನು ಅವರದೇ ಅಂಗಳದಲ್ಲಿ ಟೆಸ್ಟ್ ಸೋಲಿಗೆ ಗುರಿಪಡಿಸಿದ್ದು ಇದಕ್ಕೆ ಉತ್ತಮ ನಿದರ್ಶನ.
ಈಗ ಇನ್ನೊಂದು ಸಾಧನೆಯ ಮೂಲಕ ಅಫ್ಘಾನಿಸ್ಥಾನ ಸುದ್ದಿಯಾಗಿದೆ. ಅತೀ ಕಡಿಮೆ ಪಂದ್ಯಗಳಲ್ಲಿ 50 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ಎತ್ತರ ತಲುಪಿದೆ.
ಶನಿವಾರ ಜಿಂಬಾಬ್ವೆ ವಿರುದ್ಧ ಸಾಧಿಸಿದ ಗೆಲುವು ಅಫ್ಘಾನಿಸ್ಥಾನದ 50ನೇ ಟಿ20 ವಿಕ್ರಮವಾಗಿದೆ. ಇದಕ್ಕಾಗಿ ಆಡಿದ್ದು 72 ಪಂದ್ಯ ಮಾತ್ರ. ಹಿಂದಿನ ದಾಖಲೆ ದಕ್ಷಿಣ ಆಫ್ರಿಕಾದ ಹೆಸರಲ್ಲಿತ್ತು. ಅದು 50 ಗೆಲುವಿಗಾಗಿ 83 ಪಂದ್ಯಗಳನ್ನಾಡಿತ್ತು. ಭಾರತ, ಪಾಕಿಸ್ಥಾನ ಇದಕ್ಕಾಗಿ ತಲಾ 84 ಪಂದ್ಯಗಳನ್ನಾಡಿದ್ದವು. ಶ್ರೀಲಂಕಾ 92, ಆಸ್ಟ್ರೇಲಿಯ 97, ನ್ಯೂಜಿಲ್ಯಾಂಡ್ 99 ಪಂದ್ಯಗಳಲ್ಲಿ 50ನೇ ಗೆಲುವು ಒಲಿಸಿಕೊಂಡಿದ್ದವು. ಇದಕ್ಕಾಗಿ ನೂರಕ್ಕೂ ಹೆಚ್ಚು ಪಂದ್ಯವಾಡಿದ ಏಕೈಕ ತಂಡವೆಂದರೆ ಇಂಗ್ಲೆಂಡ್ (105 ಪಂದ್ಯ).
ಸತತ 11 ಗೆಲುವು
ಇದೇ ವೇಳೆ ಅಫ್ಘಾನಿಸ್ಥಾನ ಇನ್ನೊಂದು ದಾಖಲೆಯನ್ನೂ ನಿರ್ಮಿಸಿದೆ. ಇದು ಅಫ್ಘಾನಿಸ್ಥಾನದ ಸತತ 11ನೇ ಜಯವಾಗಿದ್ದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸತತ ಗೆಲುವು ಸಾಧಿಸಿದ ತನ್ನದೇ ದಾಖಲೆಯನ್ನು ಸರಿದೂಗಿಸಿದೆ. ಅಫ್ಘಾನ್ ಇದಕ್ಕೂ ಮುನ್ನ 2016-17ರಲ್ಲಿ ಸತತ 11 ಗೆಲುವು ದಾಖಲಿಸಿತ್ತು.