Advertisement

ಅಧಿವೇಶನದಲ್ಲಿ ಪ್ರಶ್ನಿಸಲು 50 ಪ್ರಶ್ನೆ ಸಿದ್ಧ

04:15 PM Dec 03, 2018 | Team Udayavani |

ಬಳ್ಳಾರಿ: ಕೇಂದ್ರದ ಸಂಸತ್‌ನಲ್ಲಿ ಡಿ.11ರಿಂದ ನಡೆಯಲಿರುವ ಅಧಿವೇಶನದಲ್ಲಿ ಪ್ರಶ್ನಿಸುವ ಸಲುವಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚುಕ್ಕಿಯುಳ್ಳ ಮತ್ತು ಚುಕ್ಕಿರಹಿತ ಸೇರಿದಂತೆ ಒಟ್ಟು 50 ಪ್ರಶ್ನೆಗಳನ್ನು ಸಿದ್ಧಪಡಿಸಿ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಸಂಸದ ವಿ.ಎಸ್‌.ಉಗ್ರಪ್ಪ ತಿಳಿಸಿದರು.

Advertisement

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಆರಂಭವಾಗಲಿರುವ ಡಿ.11 ರಂದು ನಾನು ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಬಳಿಕ ಬಳ್ಳಾರಿ ಕ್ಷೇತ್ರ, ರಾಜ್ಯ, ರಾಷ್ಟ್ರದ ಸಮಸ್ಯೆಗಳಿಗೆ ಜಿಲ್ಲೆಯ ಜನರ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.

ಸಂಸತ್‌ ಅಧಿವೇಶನದಲ್ಲಿ ಪ್ರಶ್ನಿಸುವ ಸಲುವಾಗಿ ಚುಕ್ಕಿಸಹಿತ 25, ಚುಕ್ಕಿರಹಿತ 25 ಸೇರಿದಂತೆ ಒಟ್ಟು 50 ಪ್ರಶ್ನೆಗಳನ್ನು
ಸಿದ್ಧಪಡಿಸಿ ದೆಹಲಿಗೆ ಕಳುಹಿಸಿಕೊಟ್ಟಿದ್ದೇನೆ. ಸೋಮವಾರ ಸಂಬಂಧಪಟ್ಟ ಅಧಿಕಾರಿಗಳ ಕೈ ಸೇರಲಿದೆ ಎಂದು ತಿಳಿಸಿದರು. 

ಅಂತಾರಾಜ್ಯ ಜಿಲ್ಲೆಗಳ ಕುಡಿಯಲು ಸೇರಿ ಕೃಷಿ ಚಟುವಟಿಕೆಗೆ ನೀರುಣಿಸುವ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ಸಂಗ್ರಹವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಹೊಸಪೇಟೆ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13 ಕಳೆದ ಐದಾರು ವರ್ಷಗಳಿಂದ ನೆನಗುದಿಗೆ ಬೀಳಲು ಕಾರಣವೇನು? ಕೊಟ್ಟೂರು-ಹೊಸಪೇಟೆ ರೈಲು ಮಾರ್ಗದಲ್ಲಿ ಬ್ರಾಡ್‌ಗೆಜ್‌ ಆದ ಬಳಿಕ 1995ರಿಂದ ಪ್ರಯಾಣಿಕ ರೈಲು ಸಂಚಾರ ಸ್ಥಗಿತಗೊಂಡಿದೆ. ಇದೀಗ ಗೂಡ್ಸ್‌ರೈಲು ಮಾತ್ರ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚಾರ ಯಾವಾಗ? ಈ ಭಾಗದ ಜನರ ಬೇಡಿಕೆಯಾಗಿದ್ದ ಬಳ್ಳಾರಿ-ಹೊಸಪೇಟೆ-ಹುಬ್ಬಳ್ಳಿ ಇಂಟರ್‌ ಸಿಟಿ ರೈಲು ಆರಂಭ ಯಾವಾಗ ಎಂಬ ಪ್ರಶ್ನೆಗಳು ಸೇರಿದಂತೆ ಜಿಲ್ಲೆಯನ್ನು ಆವರಿಸಿರುವ ಬರಪರಿಸ್ಥಿತಿ, ರೈತರ ಸಮಸ್ಯೆಗಳು, ಕುಡಿವ ನೀರು, ನೋಟು ಅಮಾನ್ಯಿಕರಣ ವಿಷಯಗಳ ಬಗ್ಗೆ ಸದನದಲ್ಲಿ ಪ್ರಶ್ನೆಗಳನ್ನು ಎತ್ತುವುದಕ್ಕೆ ಮತ್ತು ಚರ್ಚಿಸುವುದಕ್ಕೆ ಅವಕಾಶ ಸಿಕ್ಕಷ್ಟನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕ್ಷೇತ್ರ ಮತ್ತು ರಾಜ್ಯದ ಸಮಸ್ಯೆ ಪ್ರಸ್ತಾಪಿಸುವ ಮತ್ತು ಬಗೆಹರಿಸುವುದಕ್ಕೆ ಪ್ರಯತ್ನಿಸುತೇನೆ ಎಂದರು.

ಜಿಲ್ಲೆಯ ಹಗರಿ ನದಿಗೆ ಬ್ರಿಡ್ಜ್ನಿ ರ್ಮಿಸುವ ವಿಷಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ವಿಧಾನಪರಿಷತ್‌ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯನವರನ್ನು ಕೇಳಿದ್ದೇನೆ. ಆ ಕುರಿತ ಮಾಹಿತಿ ಲಭ್ಯವಾದರೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Advertisement

ಇನ್ನು ಇದಕ್ಕೂ ಮುನ್ನ ಅತಿಥಿ ಗೃಹದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮನೆಗಳಿಗೆ ಖಾತಾ ಕೊಡಿಸುವ, ಚುನಾವಣೆಯಲ್ಲಿ ಟ್ಯಾಕ್ಸಿ ಬಳಸಿಕೊಂಡು ಬಿಲ್‌ ಪಾವತಿಸದಿರುವುದು, ಶಿಕ್ಷಕರ ಸಮಸ್ಯೆಗಳು, ರೈತರ ಸಂಘದಿಂದ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳಿಗೆ ಎರಡನೇ ಬೆಳೆಗೆ ನೀರು ಹರಿಸುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಬಿ.ರಾಂಪ್ರಸಾದ್‌, ಅಸುಂಡಿ ಹೊನ್ನೂರಪ್ಪ, ಪಾಲಿಕೆ ಸದಸ್ಯ ಬೆಣಕಲ್‌ ಬಸವರಾಜ, ಬಿ.ಎಂ.ಪಾಟೀಲ್‌, ಪದ್ಮಾ ಸೇರಿದಂತೆ ಕಾರ್ಯಕರ್ತರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next