Advertisement

ಹಿಮಾಚಲ, ಉತ್ತರಾಖಂಡ, ಒಡಿಶಾದಲ್ಲಿ ಮುಂದುವರಿದ ಮಳೆಯಬ್ಬರ; 50ಕ್ಕೂ ಹೆಚ್ಚು ಸಾವು

09:07 PM Aug 21, 2022 | Team Udayavani |

ನವದೆಹಲಿ: ಉತ್ತರ ಹಾಗೂ ಪೂರ್ವ ಭಾರತದಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ, ಪ್ರವಾಹ ಹಾಗೂ ಭೂಕುಸಿತವು 50ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದೆ.

Advertisement

ವರುಣನ ಅಬ್ಬರಕ್ಕೆ ನೂರಾರು ಹಳ್ಳಿಗಳು ಜಲಾವೃತವಾಗಿದ್ದರೆ, ಮಣ್ಣಿನ ಮನೆಗಳು, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ.

ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಜಾರ್ಖಂಡ್‌, ಒಡಿಶಾಗಳ ಜನಜೀವನ ಎಡೆಬಿಡದೇ ಸುರಿಯುತ್ತಿರುವ ಮಳೆ ಹಾಗೂ ಅದರಿಂದಾಗುತ್ತಿರುವ ಅನಾಹುತಗಳಿಂದ ಅಸ್ತವ್ಯಸ್ತವಾಗಿದೆ. ಈ ರಾಜ್ಯಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

5 ಮಂದಿಯ ಪತ್ತೆಯೇ ಇಲ್ಲ:
ಹಿಮಾಚಲಪ್ರದೇಶದಲ್ಲಿ ಕಳೆದ 3 ದಿನಗಳಲ್ಲಿ 36 ಮಂದಿ ಮಳೆ ಸಂಬಂಧಿ ಅವಘಡಗಳಿಂದ ಅಸುನೀಗಿದ್ದಾರೆ. ಶನಿವಾರ ಒಂದೇ ದಿನ 22 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಶನಿವಾರ ಸಂಭವಿಸಿದ ದಿಢೀರ್‌ ಪ್ರವಾಹ ಮತ್ತು ಭೂಕುಸಿತದಿಂದ ನಾಪತ್ತೆಯಾಗಿದ್ದ 5 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳಿಗಾಗಿ ಶೋಧ ಕಾರ್ಯ:
ಉತ್ತರಾಖಂಡದಲ್ಲಿ ಸರಣಿ ಮೇಘಸ್ಫೋಟಕ್ಕೆ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ. ಶನಿವಾರ ಸಂಭವಿಸಿದ ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ಭಾನುವಾರ ಮೂವರ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾದ ಇನ್ನೂ 5 ಮಂದಿಯ ಸುಳಿವೇ ಸಿಕ್ಕಿಲ್ಲ.

Advertisement

ಒಡಿಶಾದಲ್ಲಿ ಸ್ಥಳಾಂತರ:
ಒಡಿಶಾದಲ್ಲಿ ಮಳೆಯ ಅಬ್ಬರ ಭಾನುವಾರವೂ ಮುಂದುವರಿದಿತ್ತು. ರಾಜ್ಯದ ಎರಡು ಪ್ರಮುಖ ಸುವರ್ಣರೇಖಾ ಮತ್ತು ಬೈತರಾಣಿ ನದಿಗಳ ನೀರು ಅಪಾಯದ ಮಟ್ಟ ಮೀರಿದ ಕಾರಣ ಬಾಲಸೋರ್‌ ಮತ್ತು ಮಯೂರ್‌ಭಂಜ್‌ ಜಿಲ್ಲೆಗಳಲ್ಲಿ ತಗ್ಗುಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಜಾರ್ಖಂಡ್‌ನ‌ಲ್ಲಿ 3 ಸಾವು:
ಜಾರ್ಖಂಡ್‌ನ‌ಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯು ಮೂವರನ್ನು ಬಲಿಪಡೆದುಕೊಂಡಿದೆ. ಹಲವು ಜಿಲ್ಲೆಗಳಲ್ಲಿ ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ಮರಗಳು, ವಿದ್ಯುತ್‌ಕಂಬಗಳು ಧರಾಶಾಹಿಯಾಗಿವೆ.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವೇ ಜಾರ್ಖಂಡ್‌, ಒಡಿಶಾದಲ್ಲಿ ಮಳೆ ಹೆಚ್ಚಾಗಲು ಕಾರಣ.

ರಾಜಸ್ಥಾನದಲ್ಲಿ “ವರ್ಷ’ ತಂದ ಹರ್ಷ
ಪ್ರಸಕ್ತ ಋತುವಿನಲ್ಲಿ ಸುರಿಯುತ್ತಿರುವ ಮಳೆಯು ರಾಜಸ್ಥಾನೀಯರ ಮೊಗದಲ್ಲಿ ಖುಷಿ ಮೂಡಿಸಿದೆ. ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿರುವ ಕಾರಣ, ಮುಂದಿನ ಬೇಸಗೆಯಲ್ಲಿ ರಾಜ್ಯದಲ್ಲಿ ನೀರಿನ ಅಭಾವ ಸೃಷ್ಟಿಯಾಗದು ಎಂಬ ಭರವಸೆಯೇ ಇದಕ್ಕೆ ಕಾರಣ. 716 ಡ್ಯಾಂಗಳು ಈಗಾಗಲೇ ಶೇ.73ರಷ್ಟು ಭರ್ತಿಯಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಈ ಪ್ರಮಾಣ ಶೇ.57ರಷ್ಟಿತ್ತು. ಇದೇ ವೇಳೆ, ಮುಂಗಾರು ಬೆಳೆಗಳ ಬಿತ್ತನೆ ಪೂರ್ಣಗೊಂಡಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಇಳುವರಿಯ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next