Advertisement
ಈಕೆ ಹೆಸರು ಪೂರ್ವಿ ಪುಷ್ಪರಾಜ್ ಕುಂದರ್. ಈಕೆಗಿನ್ನೂ 3 ವರ್ಷ. ಆದರೆ ಸಾಧನೆ ಮಾತ್ರ ದೊಡ್ಡದು. ಈಕೆ 50ಕ್ಕೂ ಹೆಚ್ಚು ನರ್ಸರಿ ಇಂಗ್ಲಿಷ್ ರಿದಮ್‌ಗಳನ್ನು ನಟನೆಯೊಂದಿಗೆ ಪುಸ್ತಕ ನೋಡದೆಯೇ ಹಾಡಬಲ್ಲಳು. ರಾಷ್ಟ್ರಗೀತೆ, ಶಕ್ತಿ ಸಹಿತ ಗಣಪತಿಂ ಸಂಸ್ಕೃತ ಶ್ಲೋಕವನ್ನೂ ಬಾಯಿಪಾಠ ಮಾಡಿಕೊಂಡು ತಪ್ಪಿಲ್ಲದೆ ಹಾಡುತ್ತಾಳೆ. 1ರಿಂದ 10ರ ವರೆಗೆ ಮತ್ತು ಇಂಗ್ಲಿಷ್ ವರ್ಣಮಾಲೆ ಅಕ್ಷರಗಳನ್ನು ಕೂಡ ತಪ್ಪಿಲ್ಲದೆ ಹೇಳುತ್ತಾಳೆ. ಈಕೆಯ ಪ್ರತಿಭೆಯನ್ನು ಹೆತ್ತವರು ವೀಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಂದ ಪುಟ್ಟ ಪೋರಿಯ ಸಾಧನೆಗೆ ಶ್ಲಾಘನೆ ವ್ಯಕ್ತವಾಗಿದೆ.
ಪೂರ್ವಿ ತಂದೆ ಪುಷ್ಪರಾಜ್ ಕುಂದರ್, ತಾಯಿ ವೈಶಾಲಿ ಕುಂದರ್ ಇಬ್ಬರೂ ಉದ್ಯೋಗಿಗಳು. ರಾತ್ರಿ ವೇಳೆ ಸಿಗುವ ಅಲ್ಪ ಸಮಯದಲ್ಲೇ ಮಗಳಿಗೆ ನರ್ಸರಿ ರಿದಮ್‌ಗಳನ್ನು ಅಭ್ಯಾಸ ಮಾಡಿಸಿದ್ದಾರೆ. ಎರಡು ಸಲ ಹೇಳಿಕೊಟ್ಟರೆ ಮತ್ತೆ ಆಕೆಯೇ ತಪ್ಪಿಲ್ಲದೆ ಅಭ್ಯಾಸ ಮಾಡಿ ಒಪ್ಪಿಸುತ್ತಾಳೆ. ಸಂಗೀತ ಆಲಿಸುವುದನ್ನು ಆಕೆಗೆ ಎಳವೆಯಿಂದಲೇ ಅಭ್ಯಾಸ ಮಾಡಿಸಿದ್ದೇವೆ ಎನ್ನುತ್ತಾರೆ ವೈಶಾಲಿ. 3 ಭಾಷಾ ಹಿಡಿತ!
ಈ ಪುಟ್ಟ ಪೋರಿ ಮೂರು ಭಾಷೆಗಳನ್ನು ಮಾತನಾಡಬಲ್ಲಳು. ಇಂಗ್ಲಿಷ್, ಕನ್ನಡ, ತುಳುವಿನಲ್ಲಿ ಚೆನ್ನಾಗಿ ಮಾತನಾಡುವ ಕಲೆ ಈಕೆಗೆ ಕರಗತ. ಹೆತ್ತವರಿಬ್ಬರೂ ಕೆಲಸಕ್ಕೆ ಹೋಗುವಾಗ ಬೆಂಗಳೂರಿನ ಕ್ಲೇ ಡೇ ಕೇರ್ ಸೆಂಟರ್‌ನಲ್ಲಿ ದಿನ ಕಳೆಯುವ ಪೂರ್ವಿಗೆ ಇಂಗ್ಲಿಷ್ ಮನೆಯಲ್ಲಿ ಮಾತನಾಡುವ ಭಾಷೆ. ಲಾಕ್‌ಡೌನ್ ಅವಧಿಯಲ್ಲಿ ಮಂಗಳೂರಿನ ಕೊಟ್ಟಾರ ದ್ವಾರಕಾನಗರದಲ್ಲಿರುವ ಮನೆಗೆ ಹೆತ್ತವರೊಂದಿಗೆ ಆಗಮಿಸಿರುವ ಆಕೆ ಅಜ್ಜ-ಅಜ್ಜಿಯ ಜತೆ ಸೇರಿ ಕನ್ನಡ, ತುಳು ಭಾಷೆಯನ್ನು ಆರು ತಿಂಗಳುಗಳಲ್ಲೇ ಕಲಿತು ಮಾತನಾಡುವಷ್ಟು ಶಕ್ತಳಾಗಿದ್ದಾಳೆ.