Advertisement

ಹೆದ್ದಾರಿಯಲ್ಲಿ 50 ಮೀ.ನಷ್ಟು ಕಾಮಗಾರಿ ಬಾಕಿ

01:43 AM Mar 19, 2020 | Sriram |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಎಡವಟ್ಟಿನಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು 50 ಮೀ.ನಷ್ಟು ಕಾಮಗಾರಿ ಬಾಕಿಯೇ ಆಗಿದೆ. ಇದನ್ನು ಸರಿಪಡಿಸಲು ಹೆದ್ದಾರಿ ಅಧಿಕಾರಿಗಳು ಪ್ರಯತ್ನವೇ ಪಡಲಿಲ್ಲ. ಈಗ ತಪ್ಪಿಗೆ ತೇಪೆ ಹಾಕುವ ಪ್ರಯತ್ನ ನಡೆಯುತ್ತಿದೆ. 

Advertisement

ಆದದ್ದೇನು?
ರಾ.ಹೆ. 66 ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳದಲ್ಲಿ ಹಾದು ಹೋಗುತ್ತದೆ. ಕಾರವಾರ, ಉಡುಪಿ, ಮಂಗಳೂರು ಮೂರು ಜಿಲ್ಲಾ ಕೇಂದ್ರಗಳನ್ನು ಸಂಧಿಸುತ್ತದೆ. ಸುರತ್ಕಲ್‌ನಿಂದ ಕುಂದಾಪುರವರೆಗೆ 73 ಕಿ.ಮೀ. ದೂರ ನವಯುಗ ಉಡುಪಿ ಟೋಲ್‌ವೇಯ್ಸ ಪ್ರೈ.ಲಿ. ಸಂಸ್ಥೆ ಹೆದ್ದಾರಿ ಕಾಮಗಾರಿ ನಡೆಸಿದೆ. ಇದರಲ್ಲಿ 40 ಕಿ.ಮೀ.ನಷ್ಟು ಸರ್ವಿಸ್‌ ರಸ್ತೆಯೇ ಇದೆ. ಅನಂತರ ಐಆರ್‌ಬಿ ಸಂಸ್ಥೆ 189 ಕಿ.ಮೀ. ಕಾಮಗಾರಿ ಮಾಡಿದೆ. ನವಯುಗ ಸಂಸ್ಥೆಯವರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದವರೆಗೆ ಕಾಮಗಾರಿ ಮಾಡುತ್ತಿದ್ದು ಸರ್ವಿಸ್‌ ರಸ್ತೆಯನ್ನು ಹೆದ್ದಾರಿಗೆ ತಾಗಿಸಲು ಜಲ್ಲಿ ಹಾಕಿದ್ದಾರೆ. ಅತ್ತ ಎಪಿಎಂಸಿ ಕಡೆಯಿಂದ ಐಆರ್‌ಬಿ ಸಂಸ್ಥೆಯವರು ಕಾಮಗಾರಿ ಮಾಡಿದ್ದು ಸರ್ವಿಸ್‌ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಇದರ ನಡುವಿನ 50 ಮೀ.ನಷ್ಟು ಸರ್ವಿಸ್‌ ರಸ್ತೆ ಹಾಗೂ ಹೆದ್ದಾರಿ ಕಾಮಗಾರಿ ಸದ್ಯ ಬಾಕಿ ಹಂತದಲ್ಲಿದೆ.

ಕಾಮಗಾರಿ ಬಾಕಿ
ಟೆಂಡರ್‌ ಕರೆಯುವಾಗ ಕಿ.ಮೀ. ನಮೂದಿ ಸುವಾಗ ಆದ ಎಡವಟ್ಟಿನಿಂದಾಗಿ ಇಷ್ಟು ದೂರದ ಕಾಮಗಾರಿ ಬಾಕಿಯಾಗಿದೆ. ತಾವು ವಹಿಸಿಕೊಂಡ ಕಾಮಗಾರಿಯನ್ನು ಎರಡೂ ಸಂಸ್ಥೆಯವರು ಮಾಡುತ್ತಿದ್ದು ಮಧ್ಯದ 50 ಮೀ. ಕಾಮಗಾರಿ ಎರಡೂ ಸಂಸ್ಥೆಯವರಿಗೆ ನೀಡಿರಲಿಲ್ಲ. ಇದರಿಂದಾಗಿ ಅಲ್ಲಿ ಸರ್ವಿಸ್‌ ರಸ್ತೆ ಹಾಗೂ ಹೆದ್ದಾರಿ ಕಾಮಗಾರಿ ಮಾಡಲು ಯಾರೂ ಜವಾಬ್ದಾರರಾಗಿಲ್ಲ.

ಪಿಸಿಯು
2006ರಲ್ಲಿ ನವಯುಗ ಸಂಸ್ಥೆ ಮಾಡಿದ ವಾಹನ ಗಣತಿ (ಪಿಸಿಯು) ಪ್ರಕಾರ ಕೋಟೇಶ್ವರದಲ್ಲಿ 21,249 ವಾಹನಗಳ ಲೆಕ್ಕ ದೊರೆತಿದೆ. 5,487 ದ್ವಿಚಕ್ರ ವಾಹನಗಳು, 1,036 ತ್ರಿಚಕ್ರ ವಾಹನಗಳು, 2,810 ಜೀಪು, ಕಾರು, 1,035 ಬಸ್ಸುಗಳು, 508 ಲಘು ವಾಹನಗಳು, 280 ಮಿನಿ ಬಸ್‌, 2,248 ಲಾರಿಗಳು ಚಲಿಸುತ್ತಿದ್ದವು.

ದಶಮಾನೋತ್ಸವ!
2010 ಸೆಪ್ಟಂಬರ್‌ನಿಂದ ಆರಂಭವಾದ ಕಾಮಗಾರಿ 2013ರಲ್ಲಿ ಪೂರ್ಣವಾಗಬೇಕಿತ್ತು. ಹತ್ತು ವರ್ಷಗಳಾದರೂ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಫ‌ಲಕವೇ ರಾರಾಜಿಸುತ್ತಿದೆ. ಕಾಮಗಾರಿ ನಡೆಯುತ್ತಲೇ ಇದೆ. ಇದಕ್ಕಾಗಿ 671 ಕೋ.ರೂ.ಗಳ ಚತುಷ್ಪಥ ಯೋಜನೆ ತಯಾರಿಸಿ ಕೇಂದ್ರ 221.43 ಕೋ.ರೂ. ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿತ್ತು. ಉಳಿಕೆ ಮೊತ್ತವನ್ನು ಗುತ್ತಿಗೆ ಪಡೆದ ನವಯುಗ ಕಂಪೆನಿ ಭರಿಸಿ ಅದನ್ನು ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ ಗೇಟ್‌ ಮೂಲಕ 20 ವರ್ಷಗಳಲ್ಲಿ ವಸೂಲಿ ಮಾಡಿ ಹಿಂಪಡೆಯಬೇಕು ಎಂದಿತ್ತು. ಟೋಲ್‌ ಶುರುವಾಗಿದೆ. ಹಾಗೆಯೇ ಚತುಷ್ಪಥ ಕೂಡ ಹಂಗಳೂರುವರೆಗೆ ಆಗಿದೆ. ಸಂಗಮ್‌ವರೆಗೂ ಇದು ನಡೆಯಬೇಕಿತ್ತು. ಶಾಸಿŒ ಸರ್ಕಲ್‌ನಲ್ಲಿ ಫ್ಲೈಓವರ್‌, ಬಸೂÅರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ಈಗಷ್ಟೇ ಭರದಿಂದ ನಡೆಯುತ್ತಿದೆ. ಕಾಮಗಾರಿ ನಿಧಾನಗತಿಗೆ ಕಾರಣ ಕೇಳಿದರೆ ಕಾಮಗಾರಿಯ ವಿನ್ಯಾಸದಲ್ಲಿ ನಡೆದ ಬದಲಾವಣೆ ಎನ್ನುತ್ತಾರೆ ಕಂಪನಿಯವರು. ಆದರೆ ಈಗ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಡ ಹಾಕಿದ ಕಾರಣದಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಕುಂದಾಪುರದ ಸಂಗಮ್‌ನಿಂದ ಗೋವಾ ಗಡಿವರೆಗೆ ಕಾಮಗಾರಿಯನ್ನು ಐಆರ್‌ಬಿ ಸಂಸ್ಥೆಗೆ 2014 ರಲ್ಲಿ 1,655 ಕೋ.ರೂ.ಗೆ ಗುತ್ತಿಗೆ ನೀಡಲಾಗಿದೆ.

Advertisement

ಭೂಸ್ವಾಧೀನ
ಇದೀಗ ತನ್ನಿಂದಾದ ತಪ್ಪಿಗೆ ತೇಪೆ ಹಾಕಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. 2019ರ ಡಿಸೆಂಬರ್‌ನಲ್ಲಿ ಗಜೆಟ್‌ ನೋಟಿಫಿಕೇಶನ್‌ ಆಗಿದ್ದು ಜನವರಿಯ ದಿನಪತ್ರಿಕೆಯಲ್ಲಿ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ಮಾಹಿತಿ ಪ್ರಕಟವಾಗಿದೆ. ಕೆಎಸ್‌ಆರ್‌ಟಿಸಿ ಬಳಿಯ ಮೂವರ ಜಾಗದ ಸರ್ವೆ ನಂಬರ್‌ ಇದರಲ್ಲಿ ನಮೂದಾಗಿದೆ.

ಆದೇಶಕ್ಕಿಲ್ಲ ಬೆಲೆ
ಫ್ಲೈಓವರನ್ನು 2019
ಮಾ. 31ರ ಒಳಗೆ ಪೂರ್ಣಗೊಳಿಸಿ ಎ. 1ರಿಂದ ಸಂಚಾರಕ್ಕೆ ಬಿಟ್ಟುಕೊಡಬೇಕು, ಅಂಡರ್‌ಪಾಸ್‌ ಕಾಮಗಾರಿಯನ್ನು ಎಪ್ರಿಲ್‌ ಅಂತ್ಯದ ಒಳಗೆ ಪೂರೈಸಬೇಕು ಎಂದು ಹಿಂದಿನ ಸಹಾಯಕ ಕಮಿಷನರ್‌ ಭೂಬಾಲನ್‌ ಆದೇಶ ನೀಡಿದ್ದರು. ಎಸಿಯವರ ಆದೇಶ ಉಲ್ಲಂಘನೆಯಾಗಿದ್ದು ಸಂಸ್ಥೆಯ ಬೇಡಿಕೆಯಂತೆ ಕಾಲಾವಕಾಶ ನೀಡಲಾಗಿದೆ. ಸಂಸದರು, ಜಿಲ್ಲಾಧಿಕಾರಿಗಳು, ಸಹಾಯಕ ಕಮಿಷನರ್‌ ಸತತ ಸಭೆಗಳನ್ನು ನಡೆಸಿ, ಹೋರಾಟಗಾರರು ಸರಣಿ ಪ್ರತಿಭಟನೆಗಳನ್ನು ನಡೆಸಿ ಈಗ ಕಾಮಗಾರಿಗೆ ಮರುಜೀವ ದೊರೆತಿದೆ. ಮಾ.31ಕ್ಕೆ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮೇ ಅಂತ್ಯದಲ್ಲಿ ಬಸ್ರೂರುಮೂರುಕೈ ಕಾಮಗಾರಿ ಪೂರ್ಣವಾಗ ಲಿದೆ ಎಂದು ನವಯುಗ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಅದೇನೇ ಇದ್ದರೂ ಇನ್ನು ಒಂದು ತಿಂಗಳಲ್ಲಿ ಫ್ಲೈಓವರ್‌ ಕಾಮಗಾರಿ ಮುಗಿಯುವ ಲಕ್ಷಣಗಳಿವೆ. ಉಳಿಕೆ ಕಾಮಗಾರಿಗೆ ಇನ್ನಷ್ಟು ಸಮಯ ಬೇಕಿದೆ.

ಸೂಚಿಸಲಾಗಿದೆ
ಬಿಟ್ಟುಹೋದ ಕಾಮಗಾರಿಗಾಗಿ ಭೂಸ್ವಾಧೀನಕ್ಕೆ ನೋಟಿಫಿಕೇಶನ್‌ ಆಗಿದೆ. 10 ದಿನಗಳ ಹಿಂದಷ್ಟೇ ಭೂಸ್ವಾಧೀನಾಧಿಕಾರಿಯಾಗಿ ಕಾರವಾರದವರಿಂದ ನನಗೆ ಜವಾಬ್ದಾರಿ ಬಂದಿದೆ. ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಿ ಉಳಿಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಕೆ.ರಾಜು, ಸಹಾಯಕ ಕಮಿಷನರ್‌, ಕುಂದಾಪುರ

ಪ್ರಕಟನೆ ಬಂದಿದೆ
ಹೆದ್ದಾರಿ ಇಲಾಖೆಯಿಂದ ಭೂಸ್ವಾಧೀನ ಪ್ರಕಟನೆ ಬಂದಿದ್ದು ಕಾಮಗಾರಿ ಆದಷ್ಟು ಶೀಘ್ರ ಮುಗಿಸಬೇಕು. ಇನ್ನಷ್ಟು ವರ್ಷಗಳ ಕಾಲ ಸಾಗುವಂತೆ ಮಾಡಬಾರದು. ನಾವು ಭೂಮಿ ನೀಡಲು ತಕರಾರು ಇಲ್ಲ.
-ಗಿರೀಶ್‌, ಕುಂದಾಪುರ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next