ಉಪ್ಪುಂದ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ. ರಾಘವೇಂದ್ರ ಮರವಂತೆ- ತ್ರಾಸಿ ಕರಾವಳಿ ತೀರ ಸಂರಕ್ಷಣೆ ಕಾಮಗಾರಿ ಹಾಗೂ ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಪರಿಶೀಲಿಸಿ ಮೀನುಗಾರರೊಂದಿಗೆ ಮಾತನಾಡಿದ ಅವರು ಬಾಕಿ ಉಳಿದಿರುವ ಬ್ರೇಕ್ ವಾಟರ್ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮೀನುಗಾರಿಕಾ ರಸ್ತೆಗೆ 27 ಲಕ್ಷ ರೂ. ಅನುದಾನದಲ್ಲಿ ರಸ್ತೆ ದುರಸ್ತಿ ಮಾಡುವುದಾಗಿ ತಿಳಿಸಿದರು.
ಮೀನುಗಾರ ಮುಖಂಡ ಮೋಹನ ಖಾರ್ವಿ ಅವರು ಇಲ್ಲಿನ ಕಡಲ್ಕೊರೆತ ಹಾಗೂ ಸ್ಥಳೀಯ ನಿವಾಸಿಗಳ ಅಪಾಯದ ಕುರಿತು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಸಂಸದರು ಈ ಭಾಗದ ಮೀನುಗಾರರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಡಲ್ಕೊರೆತವನ್ನು ತಡೆಯುವ ತಡೆಗೋಡೆ ನಿರ್ಮಾಣಕ್ಕೆ ರೂ.50ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ಕಳೆದ ಬಾರಿ ಕಡಲ್ಕೊರೆತದಲ್ಲಿ ಸಂತ್ರಸ್ತರಾದ ಮೀನುಗಾರರ 6 ಕುಟುಂಬದವರಿಗೆ ಪರ್ಯಾಯ ಸ್ಥಳಾವಕಾಶ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಸ್ತ ಮೀನುಗಾರರ ವತಿಯಿಂದ ಸಂಸದರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮರವಂತೆ ಗ್ರಾಮ ಪಂಚಾಯತ್ ಸದಸ್ಯರು, ಮೀನುಗಾರಿಕಾ ಅಧಿಕಾರಿಗಳು, ಮೀನುಗಾರರ ಮುಖಂಡರು, ಬಿಜೆಪಿ ನಾಯಕರು ಉಪಸ್ಥಿತರಿದ್ದರು.