Advertisement
ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳು ಹೆಚ್ಚಿನ ಪ್ರಮಾಣದ ಲಸಿಕೆ ನೀಡಲು ಗುರಿ ಹಾಕಿಕೊಂಡಿವೆ. ಉಳಿದ ರಾಜ್ಯಗಳು ಸಾಂಕೇತಿಕವಾಗಿ ಆರಂಭಿಸಿ ಮುಂದೆ ದೊಡ್ಡ ಅಭಿಯಾನ ನಡೆಸಲು ಚಿಂತನೆ ನಡೆಸಿವೆ. ರಾಜ್ಯಗಳ ಬಳಿ 3 ಕೋಟಿ ಡೋಸ್ ಲಸಿಕೆ ಲಭ್ಯವಿದೆ ಎಂದು ಕೇಂದ್ರ ಸರಕಾರ ಹೇಳಿದೆ. ದೇಶದಲ್ಲಿ ದಿನವೊಂದಕ್ಕೆ 43 ಲಕ್ಷ ಮಂದಿಗೆ ಲಸಿಕೆ ನೀಡಿರುವುದು ಇದುವರೆಗಿನ ದಾಖಲೆ. ಸೋಮವಾರ ಈ ದಾಖಲೆ ಮುರಿಯಲು ಕೇಂದ್ರ ಸರಕಾರ ನಿರ್ಧರಿಸಿದೆ.
ಸದ್ಯ ರಾಜ್ಯದಲ್ಲಿ ನಿತ್ಯ 3 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಮೇಳದ ಅಂಗವಾಗಿ 11 ಲಕ್ಷ ಮಂದಿಗೆ ನೀಡಲು ಉದ್ದೇಶಿಸಲಾಗಿದೆ. ಈ ಮೇಳದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತದೆ. ಉಳಿದಂತೆ 2ನೇ ಡೋಸ್ ಬಾಕಿ ಇರುವವರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, 18 ರಿಂದ 44 ವರ್ಷದ ರಾಜ್ಯ ಸರಕಾರ ಗುರುತಿಸಿದ ದುರ್ಬಲ ಗುಂಪಿನವರು ಮಾತ್ರ ಲಸಿಕೆ ಪಡೆಯಬಹುದು. ಮೂರು ಸಾವಿರಕ್ಕೂ ಅಧಿಕ ಆರೋಗ್ಯ ಕೇಂದ್ರಗಳಲ್ಲಿ ಮೇಳ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಎರಡೂ ಲಸಿಕೆಗಳನ್ನು ವಿತರಿಸಲಾಗುತ್ತಿದ್ದು, ಸಂಪೂರ್ಣ ಉಚಿತವಾಗಿ ಸಿಗಲಿದೆ.
Related Articles
ಮೇಳದ ದಿನವೇ ಕೊವ್ಯಾಕ್ಸಿನ್ ಮೊದಲ ಡೋಸ್ ವಿತರಣೆಯನ್ನು ಪುನರಾರಂಭಿಸಲಾಗುತ್ತದೆ. ಮೇಳಕ್ಕಾಗಿ 8.5 ಲಕ್ಷ ಡೋಸ್ ಕೊವಿಶೀಲ್ಡ್, 2.5 ಲಕ್ಷ ಡೋಸ್ ಕೊವ್ಯಾಕ್ಸಿನ್ ಮೀಸಲಿಡಲಾಗಿದೆ. ಇದಲ್ಲದೆ 4 ಲಕ್ಷ ಡೋಸ್ ದಾಸ್ತಾನು ಇದ್ದು, ಎರಡು ದಿನಗಳಲ್ಲಿ ಮತ್ತೆ 4 ಲಕ್ಷ ಡೋಸ್ ಬರಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮೂವರಲ್ಲಿ ಒಬ್ಬರಿಗೆ ಲಸಿಕೆರಾಜ್ಯದ ಪ್ರತೀ ಮೂವರಲ್ಲಿ ಒಬ್ಬರಿಗೆ ಲಸಿಕೆ ಹಾಕಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ರಾಜ್ಯದ ಒಟ್ಟು ಜನಸಂಖ್ಯೆ 6.6 ಕೋಟಿ. ಇದರಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 4.7 ಕೋಟಿ. ಜೂ. 20ರ ದಿನಾಂತ್ಯಕ್ಕೆ 1.53 ಕೋಟಿ ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟ ಮೂವರಲ್ಲಿ ಒಬ್ಬರಿಗೆ ಮೊದಲ ಡೋಸ್ ನೀಡಿದಂತಾಗಿದೆ. ಲಸಿಕೆ ಪಡೆದ 1.53 ಕೋಟಿ ಮಂದಿಯಲ್ಲಿ ಈಗಾಗಲೇ 32.5 ಲಕ್ಷ ಜನರಿಗೆ 2ನೇ ಡೋಸ್ ಪೂರ್ಣಗೊಳಿಸಲಾಗಿದೆ. ಜಿಲ್ಲೆಗಳ ಪೈಕಿ ಉಡುಪಿ, ಕೋಲಾರ, ಮೈಸೂರು, ರಾಮನಗರ, ಕೊಡಗು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ ಲಸಿಕೆ ವಿತರಣೆಯಲ್ಲಿ ಕ್ರಮವಾಗಿ ಮುಂಚೂಣಿಯಲ್ಲಿದ್ದು, ಇಲ್ಲಿ ಶೇ. 30ಕ್ಕೂ ಅಧಿಕ ಗುರಿ ಸಾಧನೆಯಾಗಿದೆ.