ಚಿಕ್ಕೋಡಿ: ಇಲ್ಲಿನ ಪಿಯು ಡಿಡಿಪಿಐ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ಹಾಗೂ ನನ್ನ ನಿಧಿಯಿಂದ 25ಲಕ್ಷದಂತೆ ಒಟ್ಟು 50 ಲಕ್ಷ ರೂ. ನೀಡಲು ನಾವು ಬದ್ಧರಾಗಿದ್ದೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಕಚೇರಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕೆಂದು ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸೂಚನೆ ನೀಡಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರ ಕೆಲಸ ಮಾಡುವುದಕ್ಕೆ ನಾನು ಆಯ್ಕೆ ಆಗಿದ್ದೇನೆ. ಅದನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ.
ಆದರೆ ನನಗೆ ಸನ್ಮಾನ, ಅಭಿನಂದನೆ ಮಾಡಲು ಸಮಯ ವ್ಯರ್ಥ ಮಾಡಬೇಡಿ ಎಂದರು. ನಿಮಗೆ ಸಮಸ್ಯೆ ಇದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಅಥವಾ ನಮ್ಮ ಕಚೇರಿಗೆ ಬನ್ನಿ. ಅತ್ಯಂತ ಸಂತೋಷದಿಂದ ನಿಮ್ಮ ಕೆಲಸ ಮಾಡುತ್ತೇನೆ. ನಿಮ್ಮ ಸಮಸ್ಯೆ ಬಗೆಹರಿಸದಿದ್ದರೆ ಕುರ್ಚಿ ಖಾಲಿ ಮಾಡುತ್ತೇನೆ ಎಂದರು. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ, ನನಗೆ ಮತ ಕೊಟ್ಟ ಮತದಾರರ ಸೇವೆ ಹಾಗೂ ಚಿಕ್ಕೋಡಿ ಭಾಗದ ಅಭಿವೃದ್ಧಿ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಹಿಂದೆ ಬೀಳುವ ಪ್ರಶ್ನೆಯೂ ಇಲ್ಲ ಎಂದು ಪ್ರಕಾಶ್ ಹುಕ್ಕೇರಿ ನುಡಿದರು.
ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ, ಶಿಕ್ಷಣ ರಂಗದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ನಿಮ್ಮೆಲ್ಲರ ಧ್ವನಿಯಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇವೆ ಎಂದು ತಿಳಿಸಿದರು.
ಸಿಟಿಇ ಸಂಸ್ಥೆಯ ಉಪಾಧ್ಯಕ್ಷ ವಿಜಯ ಮಾಂಜ್ರೆಕರ, ಚಿಕ್ಕೋಡಿ ಶಿಕ್ಷಣ ಇಲಾಖೆ ಪಿಯು ಉಪನಿರ್ದೇಶಕ ಬಿ.ಎಸ್ ಭಂಡಾರೆ , ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಮಧುಸೂದನ ಬಿಳಗಿ. ಉಪನ್ಯಾಸಕ ಸಂಘದ ಅಧ್ಯಕ್ಷ ಅಪ್ಪು ಗುರಕನವರ್, ಉಪನ್ಯಾಸಕಿ ಸಂಘದ ಅಧ್ಯಕ್ಷೆ ಸಮಾಜೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.