Advertisement

ಕರ್ನಾಟಕಕ್ಕೆ 50, ಅಭಿವೃದ್ಧಿಯ ಹೊಸ ಭಾಷ್ಯ ಬರೆಯಲಿ

01:13 AM Nov 01, 2023 | Team Udayavani |

1956ರಲ್ಲಿ ಮೈಸೂರು ರಾಜ್ಯ ಎಂಬ ಹೆಸರಿನಲ್ಲಿ ಉದಯವಾದ ಕರುನಾಡು, 1973ರಲ್ಲಿ ಕರ್ನಾಟಕ ಎಂದು ಮರುನಾಮ ಕರಣ ಆಯಿತು. ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕಎಂದು ಮರುನಾಮಕರಣ ಮಾಡಿದರು. ಈಗ ಕರ್ನಾಟಕಕ್ಕೆ 50 ವರ್ಷದ ಸಂಭ್ರಮದ ಘಳಿಗೆಯಾಗಿದ್ದು, ರಾಜ್ಯ ಸರಕಾರ ವರ್ಷಪೂರ್ತಿ ಆಚರಣೆಗೆ ಮುಂದಾಗಿದೆ.

Advertisement

ಈ 50 ವರ್ಷಗಳನ್ನು ಹಿಂದೆ ತಿರುಗಿ ನೋಡುವುದಾದರೆ, ಕರ್ನಾಟಕದ ಇತಿಹಾಸ ಭವ್ಯ, ರಮಣೀಯವಾಗಿದೆ. ಭಾವೈಕ್ಯದ ನಾಡು ಎಂದೇ ಕರೆಸಿಕೊಂಡಿರುವ ಈ ನೆಲ, ಜಗತ್ತಿಗೇ ಪ್ರಜಾಪ್ರಭುತ್ವದ ಮಾದರಿಯನ್ನು ಕೊಟ್ಟ ಶರಣಶ್ರೇಷ್ಠ ಬಸವಣ್ಣನವರದ್ದು. ಬುದ್ಧ, ಬಸವ, ಅಂಬೇಡ್ಕರ್‌ ಹಾಕಿಕೊಟ್ಟ ಮಾರ್ಗದಲ್ಲೇ ನಡೆದು ಬಂದು, ಸರ್ವರನ್ನು ಒಳಗೊಂಡ ಭೂಮಿಯಾಗಿ ಇಂದಿಗೂ ಅದೇ ಶ್ರೇಷ್ಠತೆಯನ್ನು ಉಳಿಸಿಕೊಂಡು ಮುಂದಡಿ ಇಡುತ್ತಿದೆ. ಹಸಿದು ಬಂದವರಿಗೆ ಅನ್ನ, ಸೂರು ನೀಡುವ ಈ ನಾಡು, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ತೆರಿಗೆ ಸಂಗ್ರಹದಲ್ಲಿ ಎಲ್ಲ ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿ, ಇದುವರೆಗೆ ಎರಡನೇ ಸ್ಥಾನದಲ್ಲೇ ಇರುವ ಕರ್ನಾಟಕ ದೇಶದ ಅಭಿವೃದ್ಧಿಗೂ ಬಹುದೊಡ್ಡ ಕಾಣಿಕೆ ನೀಡುತ್ತಿದೆ ಎನ್ನಲು ಅಡ್ಡಿಯೇನಿಲ್ಲ.

ಇಲ್ಲಿನ ಸಾಫ್ಟ್ವೇರ್‌ ಸೇವೆ ಅಮೆರಿಕದ ಕಂಪೆನಿಗಳ ಅಗತ್ಯಗಳನ್ನು ಪೂರೈಸುತ್ತಿದೆ. ಹೀಗಾಗಿಯೇ ಜಗತ್ತಿನಲ್ಲೇ ಕರ್ನಾಟಕದ ಬೆಂಗಳೂರು ನಾಲ್ಕನೇ ದೊಡ್ಡ ತಾಂತ್ರಿಕ ನಗರವಾಗಿ ಮಾರ್ಪಟ್ಟಿದೆ. ವಿಶ್ವದ ಬಹುತೇಕ ದೇಶಗಳು ಬೆಂಗಳೂರಿನತ್ತ ತೆರೆದ ಕಣ್ಣುಗಳಿಂದ ನೋಡುತ್ತಿವೆ. ಇದು ಕರ್ನಾಟಕದ ಹೆಗ್ಗಳಿಕೆಯಲ್ಲದೇ ಇನ್ನೇನು!

ಕೈಗಾರಿಕೆಗಳಿಂದ ಹಿಡಿದು ಸಣ್ಣಪುಟ್ಟ ಉದ್ಯಮಗಳ ವಿಚಾರದಲ್ಲಿಯೂ ಕರ್ನಾಟಕ, ಭಾರತದಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಬೇರೆ ರಾಜ್ಯ ಗಳಂತೆ ಇಲ್ಲಿ ಹೆಚ್ಚು ನಿರುದ್ಯೋಗ ಸಮಸ್ಯೆಯಾಗಲಿ ಅಥವಾ ಉತ್ತರ ಭಾರತದಲ್ಲಿ ಕಂಡು ಬರುವಂಥ ಕಳಪೆ ಜೀವನ ಮಟ್ಟವಾಗಲಿ ಇಲ್ಲ. ಇದಕ್ಕೆ ನಮ್ಮ ನಾಡು ಹೊಂದಿರುವ ವಿಭಿನ್ನ ಭೌಗೋಳಿಕ ಮತ್ತು ಪ್ರಾದೇಶಿಕ ವೈವಿಧ್ಯವೇ ಸಾಕ್ಷಿ. ನಾಡಿನ ತುಂಬೆಲ್ಲ ಹಸುರನ್ನು ಹೊತ್ತಿರುವ ಕರ್ನಾಟಕವು ನೀರಾವರಿ ಮತ್ತು ಮಳೆಯಾಶ್ರಿತ ಕೃಷಿಯಲ್ಲೂ ಉತ್ತಮ ಸ್ಥಾನದಲ್ಲೇ ಇದೆ. ನಾವು ಬೆಳೆದ ಬೆಳೆ ನಮಗೆ ಅನ್ನವಿಕ್ಕುವುದರ ಜತೆಗೆ ನೆರೆಹೊರೆಯವರ ಹೊಟ್ಟೆ ತುಂಬಿಸಲು ಬಳಕೆಯಾಗುತ್ತಿದೆ.

ಹಾಗೆಂದು ರಾಜ್ಯ ಸಮಸ್ಯೆಗಳನ್ನು ಎದುರಿಸಿಲ್ಲ ಎಂದಲ್ಲ. ನೆಲ, ಭಾಷೆ, ಜಲದ ವಿಚಾರದಲ್ಲಿ ಸವಾಲುಗಳನ್ನು ಎದುರಿಸುತ್ತಲೇ ಇದೆ. ಇಂದಿಗೂ ಕಾವೇರಿ, ಮಹದಾಯಿ, ಕೃಷ್ಣೆ ಸೇರಿದಂತೆ ಪ್ರಮುಖ ನದಿಗಳ ವಿವಾದ ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಇನ್ನೂ ಕಾಲು ಕೆರೆದು ಜಗಳವಾಡುತ್ತಲೇ ಇದೆ. ಬೆಂಗಳೂರಿನಂಥ ನಗರದಲ್ಲಿ ಪರಭಾಷಿಕರ ಹಾವಳಿಯೂ ಒಂದಷ್ಟು ಪ್ರಮಾಣದಲ್ಲಿ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಹಾಗೆಯೇ ಹಿಂದಿ ಹೇರಿಕೆಯೂ ಎಗ್ಗಿಲ್ಲದೆ ಸಾಗುತ್ತಿದ್ದು, ಇದಕ್ಕೆ ಸಾಕಷ್ಟು ಪ್ರತಿರೋಧವೂ ಕಾಣಿಸುತ್ತಿದೆ. ಆದರೆ ಕನ್ನಡ ಸಂಘಟನೆಗಳ ಹೋರಾಟ ಮತ್ತು ಸರಕಾರಗಳ ಅಗತ್ಯ ಕ್ರಮದಿಂದಾಗಿ ಭಾಷೆ ಮೇಲಿನ ದಾಳಿಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುವಲ್ಲಿ ನಾವು ಸಫ‌ಲರಾಗಿದ್ದೇವೆ.

Advertisement

ಹೀಗಾಗಿ ಕಳೆದ 50 ವರ್ಷ ಗಳಿಂದಲೂ ಸರ್ವ ಸರಕಾರಗಳ ಪ್ರಯತ್ನಗಳಿಂದಾಗಿ ಕರ್ನಾಟಕ ಉತ್ತಮ ವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಈ ಅಭಿವೃದ್ಧಿಯ ಸರಣಿ ಮುಂದೆಯೂ ಸಾಗಬೇಕಾಗಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಕರ್ನಾಟಕದ ಧ್ಯೇಯ. ಇದು ಮುಂದೆಯೂ ಸಾಗಬೇಕು. ಕುವೆಂಪು ಅವರೇ ಹೇಳಿದಂತೆ ಇದು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ನಾವು ಮುಂದುವರಿಸಿಕೊಂಡು ಹೋಗಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next