Advertisement

ಭಾರೀ ಮಳೆಗೆ 50 ಅಡಿ ಕುಸಿದ ಸೇತುವೆ

10:18 AM Oct 16, 2019 | Lakshmi GovindaRaju |

ಮೂಡಿಗೆರೆ: ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಸಂಚರಿಸುತ್ತಿರುವಾಗಲೇ ಸೇತುವೆ ಕುಸಿದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮಾಳಿಂಗನಾಡು ಬಳಿ ನಡೆದಿದೆ. ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಮಾಳಿಂಗನಾಡು ಸೇತುವೆ ಸುಮಾರು 50 ಅಡಿಗಳಷ್ಟು ಕುಸಿದಿದೆ. ಈ ಸಮಯದಲ್ಲಿ ಸೇತುವೆ ಮೇಲೆ ಸಂಚರಿಸುತ್ತಿದ್ದ ಬೈಕ್‌ ಸಹ ಸೇತುವೆಯ ಒಂದು ಭಾಗದ ಜೊತೆ ಕೆಳಗೆ ಬಿದ್ದಿದೆ.

Advertisement

ಇದರಿಂದ ಬೈಕ್‌ ಸವಾರ ತಮ್ಮಿನಕೂಡಿಗೆಯ ಪ್ರದೀಪ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಸೇತುವೆ ಕುಸಿದಿದ್ದು, ಈ ವಿಷಯ ತಿಳಿಯದೇ ಈ ಮಾರ್ಗ ವಾಗಿ ಸ್ಕೂಟಿಯಲ್ಲಿ ಬಂದ ಬಿಳಗಲಿ ಗ್ರಾಮದ ಸದಾಶಿವ ಅವರ ಸ್ಕೂಟಿ ಜಖಂಗೊಂಡಿದೆ. ಗಾಯಾಳು ಪ್ರದೀಪ್‌ ಅವರಿಗೆ ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಳಿಂಗನಾಡು ಸೇತುವೆ ಕೂವೆ ಹಿರೆಬೈಲ್‌ ಸಂಪರ್ಕ ರಸ್ತೆಯಾಗಿದ್ದು, ಅರಮನೆ ತಳಗೂರು, ಬಿಳಗಲಿ, ಮಾಳಿಂಗನಾಡು, ತಮ್ಮಿನಕೂಡಿಗೆ, ಹೆಮ್ಮಕ್ಕಿ, ಇಡಕಣಿ, ನೇರಂಕಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸೇತುವೆ ಕುಸಿತವಾಗಿರುವುದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತವಾದಂತಾಗಿದೆ.

ಹಲವೆಡೆ ಮುಂದುವರಿದ ಮಳೆ
ಬೆಂಗಳೂರು: ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಯಿತು. ಹಾಸನದಲ್ಲಿ ರಾಜ್ಯದಲ್ಲಿಯೇ ಗರಿಷ್ಠ 8 ಸೆಂ.ಮೀ. ಮಳೆ ಸುರಿಯಿತು. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ):

ಸಾಗರ 7, ಚಿಂಚೋಲಿ, ತ್ಯಾಗರ್ತಿ ತಲಾ 6, ಧರ್ಮಸ್ಥಳ, ಮಂಕಿ ತಲಾ 5, ಆಲೂರು, ನುಗ್ಗೆಹಳ್ಳಿ ತಲಾ 4, ತಾಳಗುಪ್ಪ, ಪಿರಿಯಾಪಟ್ಟಣ, ಸರಗೂರು, ಕೆ.ಆರ್‌.ಪೇಟೆ ತಲಾ 3, ಪುತ್ತೂರು, ಕೋಟ, ಸಿದ್ದಾಪುರ, ಮಡಿಕೇರಿ, ಪೊನ್ನಂಪೇಟೆ ತಲಾ 2, ಮಾಣಿ, ಬೆಳ್ತಂಗಡಿ, ಕುಂದಾಪುರ, ಕಿತ್ತೂರು, ಲೋಕಾಪುರ, ಕಲಬುರಗಿ, ಲಿಂಗಸುಗೂರು, ಭಾಗಮಂಡಲ, ನಾಪೋಕ್ಲು, ಕುಶಾಲನಗರ, ಹಾರಂಗಿ, ಲಿಂಗನಮಕ್ಕಿ,

Advertisement

ಆನವಟ್ಟಿ, ಶಿಕಾರಿಪುರ, ಶೃಂಗೇರಿ, ಮೂಡಿಗೆರೆ, ಅರಕಲಗೂಡು, ಮಾಗಡಿ ತಲಾ 1. ಶಿರಾಲಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 35.2 ಡಿ.ಸೆ. ಮತ್ತು ಬೀದರ್‌ನಲ್ಲಿ ಕನಿಷ್ಠ 19.4 ಡಿ. ಸೆ. ತಾಪಮಾನ ದಾಖಲಾಯಿತು. ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಚ್ಚಿ ಹೋದ ಟ್ರ್ಯಾಕ್ಟರ್‌
ವಿಜಯಪುರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ನದಿ ದಾಟುವ ವೇಳೆ ಪ್ರವಾಹದಲ್ಲಿ ಟ್ರ್ಯಾಕ್ಟರ್‌ ಕೊಚ್ಚಿ ಹೋಗಿದ್ದು, ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಈಜಿ ದಡ ಸೇರಿದ ಘಟನೆ ಜರುಗಿದೆ. ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಹರಿಯುವ ಡೋಣಿ ನದಿಯಲ್ಲಿ ತಾಳಿಕೋಟೆಯ ರಾಜು ಬೀಳಗಿ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ ಎಂಜಿನ್‌ ಹಾಗೂ ಎರಡು ಟ್ರಾಲಿ ಸಮೇತ ಕೊಚ್ಚಿ ಕೊಂಡು ಹೋಗಿದೆ. ಕೊಚ್ಚಿ ಹೋಗಿದ್ದ ಟ್ರ್ಯಾಕ್ಟರ್‌ ಎಂಜಿನ್‌ನನ್ನು ರೈತರು ಹಗ್ಗ ಕಟ್ಟಿ ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ.

ಟ್ರ್ಯಾಕ್ಟರ್‌ ಜೊತೆಯಲ್ಲಿ ನದಿಯಲ್ಲಿ ಸಿಲುಕಿದ್ದ ರಾಜು ಬೀಳಗಿ ಹಾಗೂ ಮನ್ಸೂರ್‌ ಬೀಳಗಿ ಈಜಿ ದಡ ಸೇರಿದ್ದಾರೆ. ಕಡಕೋಳ ಗ್ರಾಮದಿಂದ ಡೋಣಿ ನದಿ ದಾಟಿ ಕೊಂಡಗೂಳಿಗೆ ಹೊರಟಿದ್ದ ವೇಳೆ ಈ ಘಟನೆ ಜರುಗಿದೆ. ಕಡಕೋಳ ಮಾರ್ಗವಾಗಿ ಸೇತುವೆ ಇಲ್ಲದ ಕಾರಣ ನದಿಯಲ್ಲಿ 200 ಮೀ. ದಾಟಿದರೆ 1 ಕಿ.ಮೀ. ಅಂತರದಲ್ಲಿ ಈ ಭಾಗದ ರೈತರ ಜಮೀನುಗಳಿವೆ. ಸೇತುವೆ ಇಲ್ಲದ ಈ ನದಿ ಮಾರ್ಗದ ಹೊರತಾಗಿ ರೈತರು ಸುಮಾರು 30 ಕಿ.ಮೀ. ಸುತ್ತುವರಿದು ಬರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರೈತರು ಜೀವದ ಹಂಗು ತೊರೆದು ತುಂಬಿ ಹರಿಯುವ ನದಿಯಲ್ಲೇ ದಾಟಲು ಯತ್ನಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next