Advertisement

50 ದಿನ ಪೂರೈಸಿದ ಭದ್ರಾ ಹೋರಾಟ

11:05 AM Aug 06, 2019 | Team Udayavani |

ಜಗಳೂರು: ನಿರಂತರವಾಗಿ ಬರಗಾಲ ಅನುಭವಿಸುತ್ತಾ ಬಂದಿರುವ ತಾಲೂಕಿಗೆ ಭದ್ರೆ ನೀರು ಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ವಿಳಂಬವಾಗಿದ್ದು, ನಮ್ಮೆಲ್ಲರ ಹೋರಾಟದ ಫಲವಾಗಿ ಸರಕಾರ ತಾಲೂಕಿಗೆ 2.4 ಟಿಎಂಸಿ ನೀರು ಹಂಚಿಕೆ ಮಾಡಿದೆ ಎಂದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಹೇಳಿದರು.

Advertisement

ಅನಿರ್ದಿಷ್ಟಾವಧಿ ಧರಣಿ ಹೋರಾಟ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ಸೋಮವಾರ ಭಾರತ ವಿದ್ಯಾರ್ಥಿ ಫೆಡರೇಷನ್‌ ಸಹಯೋಗದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹೊರಡಿಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ತಾಲೂಕಿಗೆ ಸಮಗ್ರ ನೀರಾವರಿ ಕಲ್ಪಿಸುವಂತೆ ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದ ಫಲವಾಗಿ ಇತ್ತೀಚೆಗೆ 2.4 ಟಿಎಂಸಿ ನೀರು ಹರಿಸಲು ಸರಕಾರ ಮುಂದಾಗಿದೆ. ಆದರೆ ಕೆಲವರು ಕಾತ್ರಾಳ್‌ ಮಾರ್ಗದ ಮೂಲಕ ನೀರು ಹರಿಸುವಂತೆ ನೀರಾವರಿ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಲುವೆ ಮಾರ್ಗ ಬದಲಾವಣೆ ಮಾಡದೇ ಮೂಲ ಮಾರ್ಗ ಸಂಗೇನಹಳ್ಳಿ ಕೆರೆಯ ಮೂಲಕವೇ ತಾಲೂಕಿನ ಹಳ್ಳಿಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಸತತ 70 ವರ್ಷಗಳಿಂದ ಮಳೆಯನ್ನೇ ನಂಬಿ ಜೀವನ ನಡೆಸುವ ತಾಲೂಕಿನ ರೈತರಿಗೆ ಭದ್ರೆ ನೀರನ್ನು ಹರಿಸಿ ಬರಪೀಡಿತ ಬಯಲು ಸೀಮೆಯನ್ನು ಹಸಿರುನಾಡನ್ನಾಗಿ ಪರಿವರ್ತನೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಮುಸ್ಟೂರು ಹುಚ್ಚನಾಗಲಿಂಗ ದಾಸೋಹ ಮಠದ ಶ್ರೀ ರುದ್ರಮುನಿ ಶಿವಚಾರ್ಯ ಸ್ವಾಮಿಗಳು ಮಾತನಾಡಿ, ಪ್ರತಿ ವರ್ಷ ಮಳೆಯ ಕೊರತೆ ಯಿಂದಾಗಿ ಈ ಭಾಗದ ಜನರು ಮಲೆನಾಡು ಸೀಮೆಗಳತ್ತ ಗುಳೆ ಹೋಗುವಂತಾಗಿದೆ. ಈಗಾಗಲೇ ಆಗಸ್ಟ್‌ ಮಾಹೆ ಆರಂಭವಾಗಿದ್ದರೂ ಸಹ ಮಳೆ ಬಾರದೇ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ. ಜನ ಜಾನುವಾರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದ್ದರೂ ಜನಪ್ರತಿನಿಧಿಗಳು ಮಾತ್ರ ತಾಲೂಕಿನ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಓಡಾಡುತ್ತಿದ್ದಾರೆ. ತಾಲೂಕಿನ ಜನರ ಬವಣೆ ನೀಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಜನತೆ ಇನ್ನಾದರೂ ಎಚ್ಚೆತ್ತುಕೊಂಡು ಸಂಘಟನೆಯ ಮೂಲಕ ಸರಕಾರದ ಮೇಲೆ ಒತ್ತಡ ಹೇರಿ ತಾಲೂಕಿಗೆ ಮೂಲ ಮಾರ್ಗದ ಮೂಲಕ ನೀರು ತರಲು ಕೈಜೋಡಿಸಬೇಕು ಎಂದರು.

ಜೆಡಿಎಸ್‌ ಮುಖಂಡ ಕೆ.ಬಿ.ಕಲ್ಲೇರುದ್ರೇಶ್‌ ಮಾತನಾಡಿ ತಾಲೂಕಿಗೆ 2.4 ಟಿಎಂಸಿ ನೀರು ಹರಿದು ಬಂದರೆ ಸುಮಾರು 18 ಸಾವಿರ ಎಕರೆ ಪ್ರದೇಶವನ್ನು ಹನಿ ನೀರಾವರಿ ಮಾಡಿಕೊಳ್ಳಬಹುದಾಗಿದೆ. ತಾಲೂಕಿನ ಎಲ್ಲಾ ಭಾಗದ ಜಮೀನುಗಳು ಸಹ ಹನಿ ನೀರಾವರಿ ಪ್ರದೇಶವಾಗಲಿದ್ದು ಪ್ರತಿಯೊಬ್ಬರೂ ಹೋರಾಟ ಬೆಂಬಲಿಸಬೇಕು ಎಂದರು.

Advertisement

ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಸದಸ್ಯರಾದ ಆರ್‌.ಓಬಳೇಶ್‌, ಎಂ.ಬಿ.ಲಿಂಗರಾಜ್‌, ಪ್ರಕಾಶರೆಡ್ಡಿ, ವೀರಸ್ವಾಮಿ, ಮಹಮದ್‌ ಅನ್ವರ್‌, ಮುಖಂಡರಾದ ವಾಲಿಬಾಲ್ ತಿಮ್ಮಾರೆಡ್ಡಿ, ಯಾದವರೆಡ್ಡಿ, ಎಸ್‌.ಕೆ.ರಾಮರೆಡ್ಡಿ, ಪುಟ್ಟಣ್ಣ, ಸಣ್ಣಸೂರಯ್ಯ, ಸತ್ಯಮೂರ್ತಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜೆ.ಮಹಾಲಿಂಗಪ್ಪ, ತಾಪಂ ಮಾಜಿ ಸದಸ್ಯ ಓಬಣ್ಣ, ಅನಂತ್‌ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next