ನವದೆಹಲಿ: ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡು ಐವತ್ತು ದಿನಗಳು ಪೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ‘ನುಡಿದಂತೆ ನಡೆದ ಸರ್ಕಾರ’ ಎಂಬ ಶೀರ್ಷಿಕೆ ಇರುವ ಪ್ರಗತಿ ವರದಿಯನ್ನು ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಹಿಂದಿನ ಅವಧಿಗೆ ಹೋಲಿಕೆ ಮಾಡಿದರೆ ಎರಡನೇ ಅವಧಿಯಲ್ಲಿ ಸುಧಾರಣೆಯ ವೇಗ ಇಮ್ಮಡಿಯಾಗಿದೆ ಎಂದು ಹೇಳಿದ್ದಾರೆ. ಮೊದಲ 50 ದಿನಗಳಲ್ಲಿ ವೇಗ, ಕೌಶಲ್ಯ, ವ್ಯಾಪ್ತಿ (ಸ್ಪೀಡ್, ಸ್ಕಿಲ್, ಸ್ಕೇಲ್) ಯನ್ನು ಅಳವಡಿಸಿಕೊಳ್ಳಲಾಗಿದೆ. ರೈತರು, ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳು, ನಿರುದ್ಯೋಗಿ ಯುವಕರು ಮತ್ತು ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ವರ್ಗದವರ ಅಭಿವೃದ್ಧಿಗೆ ಮೊದಲ ದಿನದಿಂದಲೇ ಕಟಿಬದ್ಧವಾಗಿದ್ದೆವು ಎಂದು ಹೇಳಿದ್ದಾರೆ. 2024-25ನೇ ವಿತ್ತೀಯ ವರ್ಷದ ವೇಳೆಗೆ ದೇಶದ ಅರ್ಥ ವ್ಯವಸ್ಥೆಯನ್ನು 5 ಶತಕೋಟಿ ಡಾಲರ್‌ಗೆ ಕೊಂಡೊಯ್ಯುವುದು ಕೇವಲ ಕನಸು ಅಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ 2ನೇ ಬಾರಿಗೆ ಮೇ 30ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.