ಸುರಪುರ: ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಕಲಬುರಗಿ-ಯಾದಗಿರಿ ಜಿಲ್ಲೆಯ ಸಹಕಾರಿ (ಡಿಸಿಸಿ) ಬ್ಯಾಂಕ್‌ನಿಂದ 10 ಸಾವಿರ ರೈತರಿಗೆ 50 ಕೋಟಿ ಸಾಲ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬ್ಯಾಂಕ್ ಉಪಾಧ್ಯಕ್ಷ ಡಾ| ಸುರೇಶ ಸಜ್ಜನ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನ ಬಿತ್ತನೆಗಾಗಿ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಸಾಲ ವಿತರಣೆ ನಡೆಯಲಿದೆ. ಆಗಸ್ಟ್ ಅಂತ್ಯದವರೆಗೆ 200 ಕೋಟಿ ರೂ. ಸಾಲ ವಿತರಣೆ ಮಾಡಲಾಗುವುದು. ಸಾಲ ವಿತರಣೆಗೆ ಮೊದಲ ಹಂತವಾಗಿ ಎರಡು ಜಿಲ್ಲೆ ವ್ಯಾಪ್ತಿಯ 50 ವ್ಯವಸಾಯ ಸೇವಾ ಸಹಕಾರಿ ಸಂಘಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ರೈತರ ಬಲವರ್ಧನೆಗಾಗಿ ಎರಡು ಜಿಲ್ಲೆಯಲ್ಲಿ 3 ಲಕ್ಷ ರೈತರಿಗೆ ಸಾಲ ನೀಡುವ ಗುರಿ ಇದ್ದು, ಮೊದಲ ಹಂತದಲ್ಲಿ ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶಿಸಲಾಗಿದೆ. ಸುರಪುರ ತಾಲೂಕಿನ ದೇವತ್ಕಲ್, ಕೆಂಭಾವಿಯ 2ನೇ ಶಾಖೆಯ ವಿಎಸ್‌ಎಸ್‌ಎನ್ ಸಹಕಾರಿ ಸಂಘಕ್ಕೆ ತಲಾ 50 ಲಕ್ಷ ಮತ್ತು ಮುದೂ°ರು ಹಾಗೂ ಅರಕೇರಿ ವಿಎಸ್ ಎಸ್‌ಎನ್ ಸಂಘಕ್ಕೆ ತಲಾ 60 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ಪ್ರತಿ ರೈತರಿಗೆ ತಲಾ 25 ಸಾವಿರದಂತೆ ಸಾಲ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ನಷ್ಟ ಅನುಭವಿಸಿ ಮುಳುಗುವ ಹಡಗಿನಂತ್ತಿದ್ದ ಬ್ಯಾಂಕ್‌ಗೆ ಸಿಎಂ ಯಡಿಯೂರಪ್ಪನವರು 10 ಕೋಟಿ ರೂ. ಶೇರು ಬಂಡವಾಳ ನೀಡಿ ಬ್ಯಾಂಕ್ ಪುನಶ್ಚೇತನಕ್ಕೆ ಸಹಕರಿಸಿದ್ದಾರೆ. ಜೊತೆಗೆ ರೈತರ ಬೆಳೆ ಸಾಲಕ್ಕಾಗಿ ಅಫೆಕ್ಸ್ ಮತ್ತು ನಬಾರ್ಡ್‌ನಿಂದ 450 ಕೋಟಿ ಒದಗಿಸಿರುವುದು. ಅವರಲ್ಲಿನ ರೈತಪರ ಕಾಳಜಿಗೆ ಸಾಕ್ಷಿಯಾಗಿದೆ. ಬ್ಯಾಂಕ್ ಅಧ್ಯಕ್ಷ ಶಾಸಕ ರಾಜುಕುಮಾರ ಪಾಟೀಲರ ನೇತೃತ್ವದಲ್ಲಿ ಆಡಳಿತ ಮಂಡಳಿ ಪ್ರಯತ್ನದಿಂದ ಇವತ್ತು ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗಿದೆ. 21ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ತಲುಪಿಸಿರುವುದು ಆಡಳಿತ ಮಂಡಳಿ ಹೆಗ್ಗಳಿಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಅಧಿಕಾರವ ಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಒಟ್ಟು 1 ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ. ಅ ಧಿಕಾರ ವಹಿಸಿಕೊಂಡಾಗಿಂದ ಇದುವರೆಗೆ ಸುಸ್ತಿದಾರರಿಂದ 150 ಕೋಟಿ ರೂ. ಸಾಲ ವಸೂಲಾಗಿದೆ. 80 ಕೋಟಿ ರೂ. ಹೊಸ ಠೇವಣಿ ಸಂಗ್ರಹಿಸಲಾಗಿದೆ. ಬ್ಯಾಂಕ್‌ನ 10 ಶಾಖೆಗಳ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಂದಿದ್ದು, ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು. ನಿರ್ದೇಶಕ ಬಾಪುಗೌಡ ಪಾಟೀಲ, ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆ, ಮುಖಂಡ ಜಗದೀಶ ಪಾಟೀಲ ಇತರರಿದ್ದರು.