Advertisement

ಸುಧಾಕರ್‌ಗೆ 50 ಕೋಟಿ ಕಿಕ್‌ಬ್ಯಾಕ್‌

09:58 PM Oct 04, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ ಎತ್ತಿನಹೊಳೆ ಯೋಜನೆಯ ಗುತ್ತಿಗೆದಾರರಿಂದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ 50 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಮಾಜಿ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಗಂಭೀರ ಆರೋಪ ಮಾಡಿದರು.

Advertisement

ತಾಲೂಕಿನ ನಂದಿ ಗ್ರಾಮದಲ್ಲಿ ಶುಕ್ರವಾರ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೆಚ್‌ಎನ್‌ ವ್ಯಾಲಿ ನೀರಾವರಿ ಯೋಜನೆ ಸಿದ್ದರಾಮಯ್ಯನವರ ವಿಶೇಷ ಕಾಳಜಿಯಿಂದ ಅನುಷ್ಠಾನವಾಯಿತೇ ಹೊರತು ಸುಧಾಕರ್‌ರಿಂದ ಅಲ್ಲ ಎಂದರು.

ತಿಹಾರ್‌ ಜೈಲಿಗೆ ಹೋಗುತ್ತಾರೆ: ಅನರ್ಹ ಶಾಸಕ ಡಾ.ಕೆ.ಸುಧಾಕರ್‌, ಜೆಲ್ಲಿ ಕ್ರಷರ್‌ಗಳು, ಕಲ್ಲು ಕ್ವಾರಿಗಳಿಂದ ತಿಂಗಳ ತಿಂಗಳು ವಸೂಲಿ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು, ಇವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆಯಾದರೆ ಇಂದಲ್ಲ ನಾಳೆ ಅನರ್ಹ ತಿಹಾರ್‌ ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಸುಧಾಕರ್‌, ವಿಧಾನಸಭೆಯಲ್ಲಿ ಪರಿಸರ ಮಾಲಿನ್ಯ ಆಗುತ್ತಿದೆ. ಕ್ಷೇತ್ರದಲ್ಲಿ ಜೆಲ್ಲಿ ಕ್ರಷರ್‌ಗಳು ಹಾವಳಿ ಹೆಚ್ಚಾಗಿದೆ ಎಂದು ಪ್ರಶ್ನೆಗಳನ್ನು ಕೇಳಿ ಕ್ಷೇತ್ರದಲ್ಲಿ ಬಂದು ಕ್ರಷರ್‌ ಮಾಲೀಕರ ಜೊತೆಗೆ ವ್ಯವಹಾರ ಕುದರಿಸಿಕೊಳ್ಳುತ್ತಿದ್ದರು. ಸುಧಾಕರ್‌ ರಾಜಕಾಣಿಯಲ್ಲ. ವ್ಯಾಪಾರಸ್ಥ, ಡೋಂಗಿ ರಾಜಕಾರಣಿ ಎಂದರು.

ಸುಧಾಕರ್‌ಗೆ ಎರಡು ನಾಲಿಗೆ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಎಂದು ಹೇಳುವ ಸುಧಾಕರ್‌ ಶಾಸಕ ರಾಜೀನಾಮೆ ಏಕೆ ಕೊಟ್ಟರು?. ತಮ್ಮನ್ನು ಬೆಳೆಸಿದ ಸಿದ್ದರಾಮಯ್ಯನವರಿಗೆ ಪಂಗನಾಮ ಹಾಕಿ ಪಕ್ಷ ತೊರೆದು ಮತ್ತೆ ಸಿದ್ದರಾಮನವರ ಹೆಸರು ಹೇಳಿ ಕುರುಬ ಸಮುದಾಯದವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಧಾಕರ್‌ಗೆ ಎರಡು ನಾಲಿಗೆ ಇದೆ ಎಂದು ಲೇವಡಿ ಮಾಡಿದರು.

Advertisement

ಹತ್ತು ವರ್ಷಗಳ ಹಿಂದೆ ಅವರ ಆಸ್ತಿ ಮೌಲ್ಯ ಎಷ್ಟಿತ್ತು. ಈಗ ಎಷ್ಟು ಏರಿಕೆ ಆಗಿದೆ. ಈ ಬಗ್ಗೆ ತನಿಖೆ ಮಾಡಿದರೆ ಸತ್ಯಾಂಶ ತಿಳಿಯಲಿದೆ. ಸುಧಾಕರ್‌ರ ಅಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಉಪ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಸಕ ಸ್ಥಾನದಿಂದ ಅನರ್ಹಗೊಂಡ ಹತಾಶೆಯಿಂದ ಸುಧಾಕರ್‌ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಕೇಂದ್ರದ ವಿರುದ್ಧ ಕಿಡಿ: ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫ‌ಲವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಹೀನಾಯವಾಗಿದೆ. ಬಿಜೆಪಿ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ತೊಲಗಲಿ, ನಾವು ಅಧಿಕಾರ ನಡೆಸಲು ಸಮರ್ಥವಾಗಿ ಇದ್ದೇವೆ. ಕೇಂದ್ರ ಗೃಹ ಮಂತ್ರಿ ರಾಜ್ಯಕ್ಕೆ ಬಂದು ಹೋದರೂ ಕೂಡ ಇದುವರೆಗೂ ಬಿಡಿಗಾಸು ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಅನುಸೂಯಮ್ಮ, ಬಾಗೇಪಲ್ಲಿ ಎನ್‌.ಸಂಪಂಗಿ, ಟಿಕೆಟ್‌ ಆಕಾಂಕ್ಷಿಗಳಾದ ನಂದಿ ಅಂಜಿನಪ್ಪ, ಕೆ.ವಿ.ನವೀನ್‌ ಕಿರಣ್‌, ಗಂಗರೇಕಾಲುವೆ ನಾರಾಯಣಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಮುನೇಗೌಡ, ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌, ಲಾಯರ್‌ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಈ ಬಾರಿಯ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ಗೆ ಸುಪ್ರೀಂಕೋರ್ಟ್‌ ಸ್ಪರ್ಧೆಗೆ ಅವಕಾಶ ನೀಡಿದರೂ ಕೂಡ ಸುಧಾಕರ್‌ ರಾಜಕೀಯ ಭವಿಷ್ಯ ಈ ಉಪ ಚುನಾವಣೆಯಲ್ಲಿ ಅಂತ್ಯವಾಗಲಿದೆ. ನನ್ನ ಮೇಲೆ ಸುಧಾಕರ್‌ ಯಾವುದೇ ಆರೋಪ ಮಾಡಿದರೂ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದೇನೆ. ಬೇಕಾದರೆ ನಾಗಸಂದ್ರಕ್ಕೆ ಬರಲಿ. ಇಲ್ಲ. ಅವರ ಸ್ವಂತ ಊರು ಪೇರೆಸಂದ್ರಕ್ಕೆ ಬಂದರೂ ನಾನು ಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next