ಬೆಂಗಳೂರು: “ಇತ್ತೀಚಿನ ದಿನಗಳಲ್ಲಿ ಹಣಕ್ಕೆ ತಕ್ಕಂತೆ ಜನಪ್ರತಿನಿಧಿಗಳ ಪಕ್ಷ ನಿಷ್ಠೆ ಬದಲಾಗುತ್ತಿದ್ದು, ಹಣದ ಮೇಲಾಟವೇ ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುತ್ತಿದೆ’ ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಬೇಸರ ವ್ಯಕ್ತಪಡಿಸಿದರು. ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಬಿ-ಪ್ಯಾಕ್ ಹಮ್ಮಿಕೊಂಡಿದ್ದ ಬಿ-ಕ್ಲಿಪ್ ಕೋರ್ಸ್‌ನ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಜನಪ್ರತಿನಿಧಿಗಳು 50 ಕೋಟಿ ರೂ. ಕೊಟ್ಟರೆ ಒಂದು ಪಕ್ಷಕ್ಕೆ, 60 ಕೋಟಿ ರೂ. ಕೊಟ್ಟರೆ ಮತ್ತೂಂದು ಪಕ್ಷಕ್ಕೆ ಹಾರುತ್ತಾರೆ. ಚುನಾವಣೆಯಲ್ಲಿ ಒಂದೊಂದು ಓಟು ಐದು ಸಾವಿರ ರೂ.ಗೆ ಮಾರಾಟ ಆಗುತ್ತವೆ. ಹೀಗೆ ಹಣ ಕೊಟ್ಟು ಆಯ್ಕೆಯಾದವರು ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಕೇಳುತ್ತಾರೆ. ಮಂತ್ರಿ ಆಗಬೇಕೆಂಬ ಹಪಹಪಿ. ಒಂದು ವೇಳೆ ಸಚಿವನಾಗದಿದ್ದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ದುಡ್ಡು ಎಲ್ಲಿಂದ ತರುವುದು ಎಂದು ಶಾಸಕರು ಕೇಳುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ಅಂದು ಬದ್ಧತೆ ಇತ್ತು: ನಾನೂ 30 ವರ್ಷ ರಾಜಕೀಯದಲ್ಲಿದ್ದೆ. ಗೆದ್ದಾಗ ಕೇಂದ್ರ ಸಚಿವೆಯಾಗಿದ್ದೆ. ಸೋತಾಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದೆ. ಸೋತರೂ-ಗೆದ್ದರೂ ಪಕ್ಷ ದೊಡ್ಡದು. ಪಕ್ಷ ನಮಗೊಂದು ಸ್ಥಾನಮಾನ ಕೊಟ್ಟಿದೆ ಎಂಬ ಬದ್ಧತೆ ಅಂದಿನ ರಾಜಕಾರಣಿಗಳಲ್ಲಿತ್ತು. ಆದರೆ, ಇಂದು ಶಾಸಕರು ಮಾರಾಟಕ್ಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, “ನಾನು ಎಲ್ಲಿಗೇ ಹೋದರೂ ಏನು ನಡೆಯುತ್ತಿದೆ ರಾಜಕೀಯದಲ್ಲಿ? ಪ್ರಾಮಾಣಿಕ, ನಿಷ್ಠೆವುಳ್ಳ ಕಾನೂನು ರೂಪಿಸುವ ನಾಯಕರು ಎಲ್ಲಿದ್ದಾರೆ?’ ಎಂದು ಕೇಳುವಂತಾಗಿದೆ.
ದೂರದೃಷ್ಟಿ, ತಪ್ಪು ಕಂಡಾಗ ಎದ್ದು ನಿಂತು ಹೇಳುವ ಧೈಯ, ಬದ್ಧತೆ ಇದಾವುದೂ ಇಲ್ಲವಾಗಿದೆ ಎಂದರು. ಸೀಟು ಹಂಚಿಕೆ ವಿಚಾರದಲ್ಲಿಯೂ ಹಣವೇ ಮಾನದಂಡವಾಗಿದೆ. “ಇಂತಹವರಿಗೆ ಟಿಕೆಟ್ ಅಥವಾ ಸೀಟು ಕೊಡಬೇಡಿ’ ಎಂದು ಹೇಳುವ ಧೈರ್ಯವೂ ಪಕ್ಷದ ನಾಯಕರಿಗೆ ಇಲ್ಲದಂತಾಗಿದೆ. “ಜಾತಿ, ಧರ್ಮ, ಮಠ, ಹಣದ ರೀತಿಯ ಅಂಶಗಳೇ ಟಿಕೆಟ್ ಹಂಚಿಕೆ ನಿರ್ಧರಿಸುತ್ತವೆ.
ಮಹಿಳೆಯರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆಯೇ ಎಂದು ಕೇಳುತ್ತಾರೆ. ಹಾಗಿದ್ದರೆ, ಟಿಕೆಟ್ ಪಡೆದ ಪುರುಷರೆಲ್ಲರೂ ಗೆದ್ದಿದ್ದಾರಾ? ಎಂದು ಮಾರ್ಗರೇಟ್ ಆಳ್ವ ಕೇಳಿದರು. ಇದೆಲ್ಲದರ ನಡುವೆಯೂ ಪ್ರಾಮಾಣಿಕ ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳ ಅವಶ್ಯಕತೆ ಯಾವಾಗಲೂ ಇರುತ್ತದೆ. ಈ ವಿಶ್ವಾಸದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.
ಸಾಯೋವರೆಗೂ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ: “ನಾನು ಸಾಯುವವರೆಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ’ ಎಂದು ಮಾರ್ಗರೇಟ್ ಆಳ್ವ ತಿಳಿಸಿದರು. “ಕಾರವಾರದಲ್ಲಿ 2004ರಲ್ಲಿ ನಾನು ಗೆದ್ದಾಗ, ಐದು ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ವಿಶ್ವಬ್ಯಾಂಕ್, ನಬಾರ್ಡ್ ಹೀಗೆ ಬೇರೆ ಬೇರೆ ಕಡೆಯಿಂದ ಹತ್ತು ಸಾವಿರ ಕೋಟಿ ಅನುದಾನ ತೆಗೆದುಕೊಂಡು ಬಂದಿದ್ದೆ. ಆದರೆ, ಅಂತಿಮವಾಗಿ ನನಗೆ ಸಿಕ್ಕಿದ್ದು “ಸೋಲು’. ಆದ್ದರಿಂದ ಸಾಯುವವರೆಗೂ ನಾನು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ’ ಎಂದರು.