ಕಲಬುರಗಿ: ಇಲ್ಲಿನ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಜುಲೈ 10ರಂದು 10 ಸಾವಿರ ರೈತರಿಗೆ 50 ಕೋಟಿ ರೂ. ಬೆಳೆಸಾಲ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 50 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 10 ಸಾವಿರ ರೈತರಿಗೆ 50 ಕೋಟಿ ರೂ. ಸಾಲ ವಿತರಿಸಲಿದ್ದು, ಸಾಂಕೇತಿಕವಾಗಿ ಕೆಲ ರೈತರಿಗೆ ವಿತರಿಸಲಾಗುವುದು. ಮಳೆಗಾಲ ಇರುವುದರಿಂದ ಸಾವಿರ ರೈತರು ಪಾಲ್ಗೊಳ್ಳಲಿದ್ದು, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಸೇರಿದಂತೆ ಇತರ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಸಕ್ತ ಸಾಲಿನ ಬೆಳೆಸಾಲ ವಿತರಣೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮುಂದಿನ ತಿಂಗಳು ಅಂತ್ಯದೊಳಗೆ ಒಂದು ಲಕ್ಷ ಹೊಸ ರೈತರಿಗೆ 200 ಕೋಟಿ ರೂ. ಸಾಲ ವಿತರಿಸಲು ಗುರಿ ಹೊಂದಲಾಗಿದೆ. ಅಪೆಕ್ಸ್ ಬ್ಯಾಂಕ್ ನೀಡಿರುವ 200 ಕೋಟಿ ರೂ. ಸಾಲವನ್ನು ಇಲ್ಲಿಯವರೆಗೆ ಸಾಲ ಪಡೆಯದಿರುವ ಹೊಸ ರೈತರಿಗೆ ಸಾಲ ನೀಡಲಾಗುತ್ತಿದೆ. ನಬಾಡ್ ìದಿಂದ ಪಡೆಯಲಿರುವ 450 ಕೋಟಿ ರೂ. ಬಂದ ನಂತರ ಸಾಲ ಮನ್ನಾ ಪಡೆದ ರೈತರಿಗೂ ಸಾಲ ವಿತರಿಸಲಾಗುವುದು ಎಂದರು. 2022ರ ಮಾರ್ಚ್ ಅಂತ್ಯದೊಳಗೆ ರೈತರಿಗೆ ಬೆಳೆಸಾಲದ ಜತೆಗೆ ತೋಟಗಾರಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿದಂತೆ ಇತರ ವಾಣಿಜ್ಯ ಚಟುವಟಿಕೆಗಳು ಸೇರಿ ಒಟ್ಟಾರೆ 1000 ಕೋಟಿ ರೂ. ಡಿಸಿಸಿ ಬ್ಯಾಂಕ್‌ನಿಂದ ವಿತರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಕಳೆದೆರಡು ವರ್ಷದಿಂದ ರೈತರಿಗೆ ಸಾಲ ಹಂಚದಿರುವುದನ್ನು ಮನಗಂಡು ತಾವು ಅಧ್ಯಕ್ಷರಾದ ನಂತರ ಸರ್ಕಾರದಿಂದ 10 ಕೋಟಿ ರೂ. ಷೇರು ತರಲಾಗಿದೆ.
ಮುಖ್ಯವಾಗಿ 80 ಕೋಟಿ ರೂ. ಠೇವಣಿ ತರಲಾಗಿದೆ. ಸುಸ್ತಿ ಸಾಲ ವಸೂಲಾತಿಯಲ್ಲಿ ಗಣನೀಯ ಸಾಧನೆ ತೋರಲಾಗಿದ್ದು, 250 ಕೋಟಿ ರೂ.ದಲ್ಲಿ 150 ಕೋಟಿ ರೂ. ವಸೂಲಿ ಮಾಡಲಾಗಿದೆ. ಹೀಗೆ ಹಲವು ಹಂತದಲ್ಲಿ ಬ್ಯಾಂಕ್ ಪುನಶ್ಚೇತನಕ್ಕೆ ಹಗಲಿರಳು ಶ್ರಮಿಸಲಾಗಿದೆ. ಇದಕ್ಕೆಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ ಹಾಗೂ ಬ್ಯಾಂಕ್‌ನ ಆಡಳಿತ ಮಂಡಳಿ ಸಹಕಾರ, ಬೆಂಬಲ ಕಾರಣವಾಗಿದೆ ಎಂದು ಹೇಳಿದರು. ತಾವು ಅಧ್ಯಕ್ಷರಾದ ನಂತರ ಕೈಗೊಂಡ ಸುಧಾರಣೆ ಕ್ರಮದಿಂದ ರಾಜ್ಯದಲ್ಲಿ 21ನೇ ಸ್ಥಾನದಲ್ಲಿದ್ದ ಕಲಬುರಗಿ ಡಿಸಿಸಿ ಬ್ಯಾಂಕ್ ಈಗ 11 ನೇ ಸ್ಥಾನಕ್ಕೆ ಬಂದಿದೆ. 2022ರ ಮಾರ್ಚ್ ಅಂತ್ಯದೊಳಗೆ ಟಾಪ್ ಮೂರರೊಳಗೆ ಬರಲು ಶ್ರಮಿಸಲಾಗುವುದು ಎಂದು ಪ್ರಕಟಿಸಿದರು.
ಮಧ್ಯಮಾವಧಿ ಸಾಲ ವಸೂಲಾತಿಗೆ ಸೂಕ್ತ ಕ್ರಮ: ಅಸಲು 40 ಕೋಟಿ ರೂ. ಹಾಗೂ ಇದರ ಬಡ್ಡಿ ಸೇರಿ ಅಂದಾಜು 80 ಕೋಟಿ ರೂ. ಮಧ್ಯ ಮಾವಧಿ ಸಾಲ ವಸೂಲಾತಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ದೃಢ ಹೆಜ್ಜೆ ಇಟ್ಟಿದ್ದು, ಈಗಾಗಲೇ 700 ರೈತರಿಗೆ ನೋಟಿಸ್ ನೀಡಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ತಿಳಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ ಸಜ್ಜನ, ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಠಗಾ, ಶಿವಾನಂದ ಮಾನಕರ್, ಚಂದ್ರಶೇಖರ ತಳ್ಳಳ್ಳಿ, ಎಂಡಿ ಚಿದಾನಂದ ನಿಂಬಾಳ, ಧರ್ಮಣ್ಣ ದೊಡ್ಡಮನಿ ಇದ್ದರು.