ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಸಮ್ಮುಖದಲ್ಲೇ, ಅವರದೇ ಮುಂಬಯಿ ಅಂಗಳದಲ್ಲಿ ವಿರಾಟ್ ಕೊಹ್ಲಿ 50ನೇ ಶತಕದೊಂದಿಗೆ ಮೆರೆದದ್ದು ಜಾಗತಿಕ ಕ್ರಿಕೆಟಿನ ಮಹೋನ್ನತ ವಿದ್ಯಮಾನವೇ ಆಗಿದೆ. ಈ ಸಂದರ್ಭದಲ್ಲಿ ಕೊಹ್ಲಿ ಅವರೊಂದಿಗಿನ ಮೊದಲ ಭೇಟಿಯನ್ನು ಸಚಿನ್ ನೆನಪಿಸಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ.
“ಮೊದಲ ಸಲ ಭಾರತೀಯ ಕ್ರಿಕೆಟಿನ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ ಸಹ ಆಟಗಾರರೆಲ್ಲ ನನ್ನ ಪಾದ ಮುಟ್ಟಿ ನಮಸ್ಕರಿಸುವಂತೆ ನಿಮಗೆ ಸೂಚಿಸಿದ್ದರು. ನೀವು ಇದಕ್ಕೆ ಸಿದ್ಧರಾದಾಗ ತಮಾಷೆ ಮಾಡಿ ನಕ್ಕಿದ್ದರು. ನನಗೂ ನಗು ತಡೆಯಲಾಗಲಿಲ್ಲ. ಆದರೆ ಬಹಳ ಬೇಗ ನೀವು ನಿಮ್ಮ ಉತ್ಸಾಹ ಮತ್ತು ಕೌಶಲದಿಂದ ನನ್ನ ಹೃದಯವನ್ನು ಮುಟ್ಟಿದಿರಿ. ಅಂದಿನ ಚಿಕ್ಕ ಹುಡುಗನೀಗ ವಿರಾಟ್ ಆಟಗಾರನಾಗಿದ್ದಾನೆ. ವಿಶ್ವಕಪ್ ಸೆಮಿಫೈನಲ್‌ನಂಥ ದೊಡ್ಡ ಹಂತದ ಪಂದ್ಯದಲ್ಲಿ ಭಾರತೀಯನೊಬ್ಬ ನನ್ನ ದಾಖಲೆಯನ್ನು ಮುರಿದಿರುವುದಕ್ಕಿಂತ ಮಿಗಿಲಾದ ಸಂತೋಷ ಬೇರೊಂದಿಲ್ಲ’ ಎಂಬುದಾಗಿ ತೆಂಡುಲ್ಕರ್ ಕೊಹ್ಲಿ ಸಾಧನೆಯನ್ನು ಅಭಿನಂದಿಸಿದ್ದಾರೆ.
ಕನಸಲ್ಲ, ವಾಸ್ತವ: ಕೊಹ್ಲಿ
“ನನ್ನ ಹೀರೋ ಸಚಿನ್ ಪಾಜಿ ಶ್ಲಾಘಿಸಿದರು. ಪತ್ನಿ ಅನುಷ್ಕಾ ಗಾಳಿಯಲ್ಲಿ ಸಿಹಿ ಮುತ್ತು ತೇಲಿಸಿದಳು, ಫುಟ್‌ಬಾಲ್ ಹೀರೋ ಬೇಕ್‌ಹ್ಯಾಮ್ ಸ್ಟೇಡಿಯಂನಲ್ಲಿದ್ದು ವೀಕ್ಷಿಸಿದರು. ವಾಂಖೇಡೆಯ ವೀಕ್ಷಕಸ್ತೋಮ ಭೋರ್ಗರೆಯಿತು. ಇದೆಲ್ಲವೂ ನನಗೆ ಕನಸಿನಂತೆ ಭಾಸವಾಯಿತು. ಆದರೆ ಇದು ವಾಸ್ತವವೇ ಆಗಿತ್ತು…’ ವಿರಾಟ್ ಕೊಹ್ಲಿ ತಮ್ಮ 50ನೇ ಶತಕವನ್ನು ಸಂಭ್ರಮಿಸಿದ್ದು ಹೀಗೆ. “ನನ್ನ ವೃತ್ತಿ ಬದುಕಿನಲ್ಲಿ ಇಲ್ಲಿಯ ತನಕ ಸಾಗಿಬರುತ್ತೇನೆಂದು ನಾನು ಭಾವಿಸಿದವನೇ ಅಲ್ಲ. ಇದು ವಿಶ್ವಕಪ್ ಸೆಮಿಫೈನಲ್ ಪಂದ್ಯ. ಎಲ್ಲವೂ ಇಲ್ಲಿ ಸಾಕಾರಗೊಂಡಿತು. ಆದರೆ ನನಗೆ ನನ್ನ ತಂಡ ಗೆಲ್ಲುವುದು ಮುಖ್ಯ. ಈ ವಿಶ್ವಕಪ್‌ನಲ್ಲಿ ನನಗೊಂದು ಜವಾಬ್ದಾರಿ ನೀಡಿದ್ದರು. ಸಹ ಆಟಗಾರರ ಬೆಂಬಲದೊಂದಿಗೆ ಇದನ್ನು ನಿಭಾಯಿಸುತ್ತಿರುವ ಸಂತೃಪ್ತಿ ಇದೆ’ ಎಂದು ಕೊಹ್ಲಿ ಹೇಳಿದರು.