ಮುಂಬೈ:ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಎಲ್ಲಾ ಚಿತ್ರಮಂದಿರಗಳು, ಆಡಿಟೋರಿಯಂ ಹಾಗೂ ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಜನಸಂಖ್ಯೆಗೆ ಸೀಮಿತಗೊಳಿಸಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ(ಮಾರ್ಚ್ 31) ಆದೇಶ ಹೊರಡಿಸಿದೆ.
ಇದನ್ನೂ ಓದಿ:ಸ್ಮಾರ್ಟ್ ಟಿವಿ ಕ್ಷೇತ್ರ ಪ್ರವೇಶಿಸಿದ ರೆಡ್‌ಮಿ: ಮೂರು ಹೊಸ ಟಿವಿ ಮಾರುಕಟ್ಟೆಗೆ
ಕಳೆದ 24ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 25,833 ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದೆ. ಇದು ಕಳೆದ ವರ್ಷ ಕೋವಿಡ್ ಸೋಂಕು ಆರಂಭವಾದ ನಂತರ ಗರಿಷ್ಠ ಪ್ರಮಾಣದಲ್ಲಿ ಪತ್ತೆಯಾದ ಪ್ರಕರಣವಾಗಿದೆ.
ಒಂದು ವೇಳೆ ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದರೆ ಜನರು ಮತ್ತೊಂದು ಕಠಿಣ ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಸಿದ ನಂತರ ಚಿತ್ರಮಂದಿರದ ಪ್ರೇಕ್ಷಕರು ಮತ್ತು ಕಚೇರಿಗಳಲ್ಲಿ ಶೇ.50ರಷ್ಟು ಪ್ರಮಾಣದಲ್ಲಿ ಸಿಬ್ಬಂದಿಗಳಿಗೆ ಅವಕಾಶ ಕಲ್ಪಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.
ಆರೋಗ್ಯ ಮತ್ತು ಇತರ ತುರ್ತು ಸೇವೆಯನ್ನು ಹೊರತುಪಡಿಸಿ ಬೇರೆ ಎಲ್ಲಾ ಖಾಸಗಿ ಸಂಸ್ಥೆಗಳು ಶೇ.50ರ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.