ಛತ್ತೀಸ್ ಗಢ್: ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತಂದೆ ಅಪಘಾತದಲ್ಲಿ ನಿಧನರಾದ ಕಾರಣ 5 ವರ್ಷದ ಅವರ ಮಗುವನ್ನೇ ಮಕ್ಕಳ ಕಾನ್ಸ್ ಟೇಬಲ್ ಯನ್ನಾಗಿ ಪೊಲೀಸ್ ಇಲಾಖೆ ನೇಮಿಸಿರುವ ಘಟನೆ ಛತ್ತೀಸ್ ಗಢದ ಸರ್ಗುಜಾದಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ರಾಜ್ ಕುಮಾರ್ ರಾಜವಾಡೆ ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ನೋವಿನಲ್ಲಿದ್ದ ರಾಜ್ ಕುಮಾರ್ ರಾಜವಾಡೆ ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆಯ ಆಡಳಿತ ಮಂಡಳಿ ಅನುಕಂಪದ ಆಧಾರದ ಮೇಲೆ ರಾಜ್ ಕುಮಾರ್ ರಾಜವಾಡೆ ಅವರ 5 ವರ್ಷದ ಮಗನಾಗಿರುವ ನಮನ್ ರಾಜವಾಡೆ ಅವರನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನಿಯೋಜಿಸಿದೆ.
ಇದನ್ನೂ ಓದಿ: ರಾಹುಲ್ ಅನರ್ಹತೆಗೆ ಪ್ರತ್ಯುತ್ತರವಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ: ಪ್ರಿಯಾಂಕಾ
ಯುಕೆಜಿ ಓದುತ್ತಿರುವ ನಮನ್ ರಾಜವಾಡೆ ಅವರನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿರುವುದಕ್ಕೆ ಮಾತನಾಡಿರುವ ತಾಯಿ ನೀತು ರಾಜವಾಡೆ “ಪತಿಯ ನಿಧನದಿಂದ ನೊಂದಿದ್ದೇನೆ. ಮಗುವಿಗೆ ಕಾನ್ಸ್ ಟೇಬಲ್ ಹುದ್ದೆ ನೀಡುರುವುದಕ್ಕೆ ಸಮಾಧಾನವಿದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ಸೂಪರಿಂಟೆಂಡೆಂಟ್, ಭಾವನಾ ಗುಪ್ತಾ “ಆಡಳಿತ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಗಳ ಪ್ರಕಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಪಘಾತದಲ್ಲಿ ರಾಜ್ ಕುಮಾರ್ ರಾಜವಾಡೆ ಮೃತಪಟ್ಟಿದ್ದಾರೆ. ಇಂತಹ ಪ್ರಕರಣದಲ್ಲಿ ಕುಟುಂಬದಲ್ಲಿ ಯಾರಾದರೂ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಇದ್ದರೆ, ಅವರನ್ನು ಮಕ್ಕಳ ಕಾನ್ಸ್ ಟೇಬಲ್ ಯನ್ನಾಗಿ ನೇಮಿಸಲಾಗುತ್ತದೆ ಎಂದು ಎಎನ್ ಐಗೆ ತಿಳಿಸಿದ್ದಾರೆ.