Advertisement

ಧಾರವಾಡ ಕಟ್ಟಡ ಕುಸಿತ: 2 ಸಾವು;30 ಮಂದಿ ರಕ್ಷಣೆ

10:57 AM Mar 19, 2019 | Team Udayavani |

ಧಾರವಾಡ:ನಿರ್ಮಾಣ ಹಂತದ ಬೃಹತ್ ಕಾಂಪ್ಲೆಕ್ಸ್ ನೋಡ, ನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ಕುಸಿದು ಬಿದ್ದ ಘಟನೆ ಮಂಗಳವಾರ ಧಾರವಾಡದಲ್ಲಿ ನಡೆದಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಲವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

Advertisement

ಐದು ಅಂತಸ್ತಿನ ಕಟ್ಟಡದ ನಿರ್ಮಾಣ ನಡೆಯುತ್ತಿದ್ದು, ಕೆಳ ಅಂತಸ್ತಿನಲ್ಲಿ ಹಲವಾರು ಅಂಗಡಿಗಳಿದ್ದವು. ಕಟ್ಟಡ ಕುಸಿತದ ಘಟನೆಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದಾರೆ.

ಅವಶೇಷಗಳಡಿ ಸಿಲುಕಿದವರು ಕಾಪಾಡಿ, ಕಾಪಾಡಿ ಎಂದು ಕೂಗಾಡುತ್ತಿರುವುದು ಕೇಳಿಸುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಟ್ಟಡ ಕುಸಿತದ ಅವಶೇಷಗಳಡಿ ಸಿಲುಕಿದವರಲ್ಲಿ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.

ಗಾಯಾಳುಗಳನ್ನು ಸಾಗಿಸಲು ಹತ್ತು ಆ್ಯಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. 3 ಅಗ್ನಿಶಾಮಕ ವಾಹನ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next