“ಅಕ್ಷರಂ ಕಲಿಸಿದಾತನೇ ಗುರು’ ಎನ್ನುವ ಮಾತುಂಟು. ವಿದ್ಯೆ ಕಲಿಸುವುದಕ್ಕಾಗಿಯೇ ಬದುಕನ್ನು ಮೀಸಲಿಡುವ ಮೇಷ್ಟ್ರ ಶ್ರದೆಟಛಿ ಒಂದು ಕಡೆ. ಅದರಾಚೆಗೆ, ಕೆಲವು ಮೇಷ್ಟ್ರು ಇದ್ದಾರೆ… ಹಾಗೆ ಪಾಠ ಮಾಡುತ್ತಲೇ, ಸಮಾಜಕ್ಕೆ ಉಪಕಾರ ಆಗುವಂಥ ಯಾವುದೋ ಪುಣ್ಯದ ಕೆಲಸ ಮಾಡುತ್ತಿರುತ್ತಾರೆ. ಅಂಥ ಅಪರೂಪದ ಮಾಸ್ತರರು,ಶಿಕ್ಷಕರ ದಿನ (ಸೆಪ್ಟೆಂಬರ್ 5) ಸಮೀಪದ ಈ ಹೊತ್ತಿನಲ್ಲಿ ಸ್ಮರಣೀಯರು…
ದೇಶದ ಗಡಿಯಲ್ಲಿ ಒಬ್ಬ ಸೈನಿಕ ಏನೇನು ಕಸರತ್ತು ಮಾಡ್ತಾನೆ, ಅನ್ನೋದನ್ನು ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಮಕ್ಕಳು ಚೆನ್ನಾಗಿ ಬಲ್ಲರು. ಸೈನಿಕರಂತೆಯೇ ಸಮವಸ್ತ್ರ ತೊಟ್ಟು, ಪರೇಡ್‌ನ ಗೌರವ ವಂದನೆ ಸಲ್ಲಿಸೋದು, ವಿಐಪಿಗಳಿಗೆ ಜನರಲ್ ಸೆಲ್ಯೂಟ್ ಹೊಡೆಯೋದು, ಕವಾಯತು ಮಾಡೋದು… ಥೇಟ್ ಯೋಧರ ಝೆರಾಕ್ಸ್ ಕಾಪಿಯಂತೆ.
ಇದಕ್ಕೆಲ್ಲ ಕಾರಣ, ಈ ಊರಿನ ಮೇಷ್ಟ್ರು! ಹೆಸರು, ರಮೇಶ ಪೂಜೇರಿ. ಮಕ್ಕಳ ಹೃದಯದಲ್ಲಿ ದೇಶಪ್ರೇಮದ ಬೀಜ ಬಿತ್ತುವ ಕೆಲಸವನ್ನು ನಿರಂತರ ಮಾಡುತ್ತಿರುವ ಅಪರೂಪದ ಶಿಕ್ಷಕ. ಮಾಜಿ ಸೈನಿಕರೂ ಆಗಿರುವ ಇವರು, 2005ರಲ್ಲಿ ನಿವೃತ್ತಿ ಹೊಂದಿ, ಹಿರೇಕುಂಬಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲಾ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಭಾರತೀಯ ಸೈನ್ಯದ ಸಮವಸ್ತ್ರಗಳನ್ನು ಕೊಡಿಸಿ, ಸೈನಿಕರ ತರಬೇತಿ ನೀಡುತ್ತಾರೆ. ಕಾರ್ಗಿಲ್ ವಿಜಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಿದ್ದಾಗ, ಇಲ್ಲಿನ ಮಕ್ಕಳ ಕವಾಯತು ನೋಡುವುದೇ ಒಂದು ಚೆಂದ. ಪ್ರತಿ ಶನಿವಾರ ಮಧ್ಯಾಹ್ನ ಮಕ್ಕಳಿಗೆ ಕವಾಯತು ತರಬೇತಿ, ವೈರಿಗಳನ್ನು ಎದುರಿಸುವ ಕಲೆ, ಕಾರ್ಗಿಲ್ ಯುದ್ಧದ ಬಗ್ಗೆ ಮರದ ರೈಫಲ್‌ಗಳನ್ನು, ಬೋಫೋರ್ಸ್ ಟ್ಯಾಂಕರ್‌ಗಳನ್ನು ತಯಾರಿಸಿ ಅಣಕು ಪ್ರದರ್ಶನ ನಡೆಸಲಾಗುತ್ತದೆ. ಶವ ಪೆಟ್ಟಿಗೆಗಳನ್ನು ಇಟ್ಟು ವೀರ ಯೋಧರಿಗೆ ಅಂತಿಮ ನಮನ ಸಲ್ಲಿಸುವ ಅರ್ಧ ತಾಸಿನ ಅಣಕು ಪ್ರದರ್ಶನ ಹೇಳಿಕೊಡುತ್ತಾರೆ.
– ಭೈರೋಬಾ ಕಾಂಬಳೆ,ಬೆಳಗಾವಿ