ನವದೆಹಲಿ:ಭಾರತ ಮತ್ತು ಫ್ರಾನ್ಸ್ ನಡುವಿನ 36 ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಐದು ರಾಫಲ್ ಯುದ್ಧ ವಿಮಾನ ಸೋಮವಾರ ಫ್ರಾನ್ಸ್ ನಿಂದ ಹೊರಡಲಿದ್ದು, ಬುಧವಾರ ಭಾರತದ ಸೇನಾಬತ್ತಳಿಕೆಗೆ ಸೇರ್ಪಡೆಯಾಗಿದೆ ಎಂದು ವರದಿ ತಿಳಿಸಿದೆ.
ಬಹು ನಿರೀಕ್ಷೆಯ ರಾಫೆಲ್ ಯುದ್ಧ ವಿಮಾನ ಕೊನೆಗೂ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗುತ್ತಿದ್ದು, ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಯಲ್ಲಿ ಬಂದಿಳಿಯಲಿದೆ ಎಂದು ವರದಿ ವಿವರಿಸಿದೆ.
ಫ್ರಾನ್ಸ್ ನಿಂದ ಹೊರಟಿರುವ ರಾಫೆಲ್ ಯುದ್ಧ ವಿಮಾನ ಬರೋಬ್ಬರಿ 7000 ಸಾವಿರ ಕಿಲೋ ಮೀಟರ್ ದೂರವನ್ನು ಕ್ರಮಿಸಲಿದ್ದು, ಆಕಾಶ ಮಾರ್ಗದಲ್ಲಿಯೇ ಇಂಧನ ತುಂಬಿಸಿಕೊಳ್ಳುವ ವಿಶಿಷ್ಟ ಸೌಲಭ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ 7000 ಕಿಲೋ ಮೀಟರ್ ಪ್ರಯಾಣದಲ್ಲಿ ಯುಎಇಯಲ್ಲಿ ಮಾತ್ರವೇ ರಾಫೆಲ್ ಜೆಟ್ ನಿಲುಗಡೆಯಾಗಲಿದೆ. ರಾಫೆಲ್ ಯುದ್ಧ ವಿಮಾನ ಭಾರತದತ್ತ ಹೊರಟಿರುವ ಬಗ್ಗೆ ಫ್ರಾನ್ಸ್ ನಲ್ಲಿರುವ ರಾಯಭಾರ ಕಚೇರಿ ಚಿತ್ರಗಳನ್ನು ಹಂಚಿಕೊಂಡಿದೆ.
ಭಾರತ ಮತ್ತು ಫ್ರಾನ್ಸ್ ನಡುವೆ ರಾಫೆಲ್ ಯುದ್ಧ ವಿಮಾನ ಖರೀದಿಗಾಗಿ ಸುಮಾರು 7.8 ಬಿಲಿಯನ್ ಯುರೋ ಒಪ್ಪಂದ ನಡೆದಿತ್ತು. ಇದು ಡಸಾಲ್ಟ್ ರಾಫೆಲ್ ಮಲ್ಟಿರೋಲ್ ಡಸಾಲ್ಟ್ ಏವಿಯೇಷನ್ ನಿರ್ಮಿಸಿದ ಯುದ್ಧ ವಿಮಾನವಾಗಿದೆ. ನೆರೆಯ ಪಾಕಿಸ್ತಾನ, ಚೀನ ದೇಶಗಳ ಗಡಿ ಕ್ಯಾತೆಯ ಹಿನ್ನೆಲೆಯಲ್ಲಿ ರಾಫೆಲ್ ಜೆಟ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗುತ್ತಿರುವುದು ಆನೆ ಬಲ ಬಂದಂತಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ರಾಫೆಲ್ ಏರ್ ಕ್ರಾಫ್ಟ್ ಹಾರಾಟವನ್ನು ಭಾರತೀಯ ರಾಯಭಾರಿ ಜಾವೇದ್ ಅಶ್ರಫ್ ವೀಕ್ಷಿಸಿದರು. ಅಲ್ಲದೇ ಭಾರತೀಯ ಪೈಲಟ್ ಗಳನ್ನು ಭೇಟಿಯಾಗಿ ಜಗತ್ತಿನ ಅತ್ಯಾಧುನಿಕ ಮತ್ತು ಶಕ್ತಿಶಾಲಿ ಯುದ್ಧ ವಿಮಾನ ಹಾರಾಟ ನಡೆಸುತ್ತಿರುವುದಕ್ಕೆ ಅಭಿನಂದನೆ ತಿಳಿಸಿ, ಯಶಸ್ವಿಯಾಗಲಿ ಎಂದು ಶುಭಹಾರೈಸಿರುವುದಾಗಿ ವರದಿ ತಿಳಿಸಿದೆ.