ನವದೆಹಲಿ: ನಿರೀಕ್ಷೆಯಂತೆ ಫ್ರಾನ್ಸ್ ನಿಂದ 7,634 ಕಿಲೋ ಮೀಟರ್ ದೂರ ಕ್ರಮಿಸಿ 5 ರಫೇಲ್ ಯುದ್ಧ ವಿಮಾನ ಬುಧವಾರ ಹರಿಯಾಣದ ಅಂಬಾಲ ವಾಯುನೆಲೆಗೆ ಬಂದಿಳಿದಿದೆ.
ಫ್ರೆಂಚ್ ವಾಯುಯಾನ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್ ಕಾರ್ಖಾನೆ ನಿರ್ಮಿಸಿದ ಫೈಟರ್ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್ ನಗರದ ಮೆರಿಗ್ನಾಕ್ ವಾಯು ನೆಲೆಯಿಂದ 7 ತಾಸಿನ ಪ್ರಯಾಣ ಮುಗಿಸಿ, ಮಂಗಳವಾರ ಯುಎಇಯ ಅಲ್‌ದಾಫ್ರಾ ನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿತ್ತು.
ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಅವರು ಅಂಬಾಲ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತಿಸಿದ್ದರು. ಏತನ್ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ, ಅಂಬಾಲ ನೆಲದ ಮೇಲೆ ಪಕ್ಷಿ(ರಫೇಲ್) ಸುರಕ್ಷಿತವಾಗಿ ಭೂಸ್ಪರ್ಶಿಸಿವೆ ಎಂದು ಟ್ವೀಟ್ ಮಾಡಿದ್ದರು.
ಫ್ರಾನ್ಸ್‌ನಿಂದ ಹೊರಟು ಯುಎಇಯ ಅಲ್-ಧಫ್ರಾ ವಾಯು ನೆಲೆಯಲ್ಲಿ ವಿಶ್ರಾಂತಿಗಾಗಿ ತಂಗಿದ್ದ ರಫೇಲ್ ಪೈಲಟ್‌ಗಳು ಮಂಗಳವಾರ ಅಲ್ಲಿಂದ ಅಂಬಾಲದತ್ತ ಪ್ರಯಾಣ ಶುರು ಮಾಡಿತ್ತು. ಮಾರ್ಗ ಮಧ್ಯೆಯೇ 30 ಸಾವಿರ ಅಡಿ ಎತ್ತರದಲ್ಲಿ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಿದ್ದು. ಭಾರತದ ಮಟ್ಟಿಗೆ ಇದೊಂದು ಮಹತ್ವದ ಸಾಧನೆಯೇ ಆಗಿತ್ತು.
ಪಾಕಿಸ್ತಾನ ಮತ್ತು ಚೀನಾಕ್ಕೆ ಇದೊಂದು ನೇರ ಸಂದೇಶವಾಗಿದ್ದು, ರಾಜನಾಥ್ ಸಿಂಗ್ ಅವರು ಈ ಬೆಳವಣಿಗೆ ಕುರಿತು ಮಾಡಿರುವ ಟ್ವೀಟ್ ನಲ್ಲಿ, ಅಂಬಾಲಾ ವಾಯುನೆಲೆಗೆ ಹಕ್ಕಿಗಳು ಸುರಕ್ಷಿತವಾಗಿ ಬಂದಿಳಿದಿದೆ. ರಫೇಲ್ ಯುದ್ಧ ವಿಮಾನಗಳು ಭಾರತದ ಭೂಮಿಯನ್ನು ಸ್ಪರ್ಶಿಸುವ ಮೂಲಕ ನಮ್ಮ ಸೇನಾ ಇತಿಹಾಸದಲ್ಲಿ ಹೊಸ ಯುಗವೊಂದು ಆರಂಭಗೊಂಡಂತಾಗಿದೆ ಎಂದು ಬಣ್ಣಿಸಿದ್ದಾರೆ.