ವಲೆನ್ಸಿಯಾ: ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಜುಗ್ರಾಜ್ ಸಿಂಗ್ ಅವರ ಅವಳಿ ಗೋಲುಗಳ ನೆರವಿನಿಂದ ಭರಾತ ತಂಡವು ಐದು ರಾಷ್ಟ್ರಗಳ ನಡುವಣ ಹಾಕಿ ಕೂಟದ ತನ್ನ ನಾಲ್ಕನೇ ತಥಾ ಅಂತಿಮ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 5-4 ಗೋಲುಗಳಿಂದ ಸೋಲಿಸಲು ಯಶಸ್ವಿಯಾಯಿತು.
ಜುಗ್ರಾಜ್ ಅವರು ಪಂದ್ಯದ 20ನೇ ಮತ್ತು 60ನೇ ನಿಮಿಷದಲ್ಲಿ ಗೋಲು ಹೊಡೆದಿದ್ದರೆ ಹರ್ಮನ್‌ಪ್ರೀತ್ 25ನೇ ಮತ್ತು 56ನೇ ನಿಮಿಷದಲ್ಲಿ ಗೋಲಿನ ಗುರಿ ಸಾಧಿಸಿ ಭಾರತ ಸಮಾಧಾನಕರ ಗೆಲುವು ದಾಖಲಿಸಲು ನೆರವಾದರು. ಭಾರತದ ಇನ್ನೊಂದು ಗೋಲನ್ನು ವಿವೇಕ್ ಸಾಗರ್ ಪ್ರಸಾದ್ ಹೊಡೆದಿದ್ದರು.
ಫ್ರಾನ್ಸ್ ವಿರುದ್ಧ ಗೆಲುವಿನೊಂದಿಗೆ ಭಾರತ ಈ ಕೂಟದಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿತು. ಭಾರತ ಈ ಮೊದಲು ನಡೆದ ಪಂದ್ಯಗಳಲ್ಲಿ ಸ್ಪೇನ್ (0-1), ಬೆಲ್ಜಿಯಂ (2-7) ಮತ್ತು ಜರ್ಮನಿ (2-3) ವಿರುದ್ಧ ಸೋಲನ್ನು ಕಂಡಿತ್ತು. ಫ್ರಾನ್ಸ್ ಈ ಕೂಟದಲ್ಲಿ ಆಡಿದ ತಂಡಗಳಲ್ಲಿ ಕೆಳಗಿನ ರ್‍ಯಾಂಕಿನ (9ನೇ) ತಂಡವಾಗಿದ್ದರೆ ಭಾರತ ಮೂರನೇ ರ್‍ಯಾಂಕ್ ಹೊಂದಿತ್ತು.
ಪಂದ್ಯದ ಮೊದಲ ಕ್ವಾರ್ಟರ್ ಅವಧಿಯಲ್ಲಿ ಫ್ರಾನ್ಸ್ ಮುನ್ನಡೆ ಸಾಧಿಸಿತ್ತು. 11ನೇ ನಿಮಿಷದಲ್ಲಿ ತಂತಕ್ಕೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವದಲ್ಲಿ ಲುಕಾಸ್ ಮಾಂಟೆಕಾಟ್ ಗೋಲನ್ನು ಹೊಡೆದಿದ್ದರು. ದ್ವಿತೀಯ ಕಾರ್ಟರ್‌ನ ಆರಂಭದಲ್ಲಿಯೇ ಭಾರತ ಫೀಲ್ಡ್ ಗೋಲು ಮೂಲಕ ಸಮಬಲ ಸ್ಥಾಪಿಸಲು ಯಶಸ್ವಿಯಾಯಿತು. ಜುಗ್ರಾಜ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದರೆ ಹರ್ಮನ್‌ಪ್ರೀತ್ ಇನ್ನೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆದು ಭಾರತದ ಮುನ್ನಡೆಯನ್ನು 3-ಕ್ಕೇರಿಸಿದರು.