ಮುಂಬೈ: ಮಕ್ಕಳ ಕಳ್ಳರ ವದಂತಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಶಂಕಾಸ್ಪದ ಅಪರಿಚಿತ ವ್ಯಕ್ತಿಗಳನ್ನು ಅಮಾನುಷವಾಗಿ ಹತ್ಯೆಗೈಯ್ಯುವ ಚಾಳಿ ಮುಂದುವರಿದಿದೆ. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಲಾಗುತ್ತಿದ್ದರೂ, ಇಂಥ ಅಮಾನವೀಯ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ಈಗ ಮಹಾರಾಷ್ಟ್ರವೂ ಸೇರ್ಪಡೆಯಾಗಿದ್ದು, ಭಾನುವಾರ ಶಂಕಾಸ್ಪದವಾಗಿ ಕಂಡು ಬಂದ ಐವರನ್ನು ಇಲ್ಲಿ
ಬರ್ಬರವಾಗಿ ಕೊಲೆಗೈಯ್ಯಲಾಗಿದೆ.
ರಾಜ್ಯದ ಧುಲೆ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ರೈನ್‌ಪಡಾ ಕುಗ್ರಾಮದಲ್ಲಿ ಬಸ್‌ನಿಂದ ಈ ಐವರು ಸೇರಿದಂತೆ ಹಲವರು ಇಳಿದಿದ್ದಾರೆ. ಈ ಪೈಕಿ ಓರ್ವ, ಗ್ರಾಮದ ಬಾಲಕಿಯನ್ನು ಮಾತನಾಡಿಸಿದ್ದಾನೆ. ಇದರಿಂದ ಅನುಮಾನಗೊಂಡ ಗುಂಪೊಂದು ಸುತ್ತುಗಟ್ಟಿ, ಈ ಐವರನ್ನು
ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿದೆ. ಈ ಭಾಗದಲ್ಲೂ ಇತ್ತೀಚೆಗೆ ಮಕ್ಕಳ ಅಪಹರಣಕಾರರು ಬಂದಿದ್ದಾರೆ ಎಂಬ ವದಂತಿ ಜೋರಾಗಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಈ ಅಪರಿಚಿತರನ್ನು ಕೊಲೆ ಮಾಡಲಾಗಿದೆ. ಘಟನೆ ಸಂಬಂಧ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏತನ್ಮಧ್ಯೆ, ಅಸ್ಸಾಂನ ಗುವಾಹಟಿ ಬಳಿಯ ಸೋನಿತುರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಮಕ್ಕಳ ಕಳ್ಳಿ ಎಂದು ಭಾವಿಸಿ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಮನಬಂದರೆ ಥಳಿಸಿದ ಘಟನೆಯೂ ವರದಿಯಾಗಿದೆ.
ತಿಂಗಳಲ್ಲಿ 14 ಕೊಲೆ: ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಬಂದಿದ್ದ ವ್ಯಕ್ತಿ ಯೊಬ್ಬನನ್ನು ಮಕ್ಕಳ ಕಳ್ಳನೆಂದು ಸ್ಥಳೀಯರ ಗುಂಪು ಬ್ಯಾಟ್ ಮತ್ತಿತರ ವಸ್ತುಗಳಿಂದ ಚಚ್ಚಿ ಸಾಯಿಸಿತ್ತು. ತ್ರಿಪುರದಲ್ಲೂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಜತೆಗೆ ಈ ಕುರಿತು ಜನಜಾಗೃತಿ ಮೂಡಿಸಲು ಬಂದಿದ್ದ ವ್ಯಕ್ತಿಯನ್ನೇ ಇದೇ ಆರೋಪ ಹೊರಿಸಿ ಹತ್ಯೆಗೈಯ್ಯ ಲಾಗಿತ್ತು. ಅಸ್ಸಾಂನಲ್ಲೂ ಇಬ್ಬರನ್ನು ಸ್ಥಳೀಯರು
ಹೊಡೆದು ಕೊಂದಿದ್ದರು. ಕಳೆದ 1 ತಿಂಗಳ ಅವಧಿಯಲ್ಲಿ 14 ಮಂದಿಯನ್ನು ಈ ರೀತಿ ಹತ್ಯೆ ಮಾಡಲಾಗಿದೆ.