ಚಾಮರಾಜನಗರ : ಗುಂಡು ಹಾರಿಸಿಕೊಂಡು ಒಂದೇ ಕುಟುಂದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾದ ಓಂ ಪ್ರಕಾಶ್ (36) , ಪತ್ನಿ ನಿಖಿತಾ(30), ಮಗ ಆರ್ಯ ಕೃಷ್ಣ(4) , ತಾಯಿ ಹೇಮಲತಾ (60), ತಂದೆ ನಾಗರಾಜು ಭಟ್ಟಾಚಾರ್ಯ (65) ಆತ್ಮಹತ್ಯೆಗೆ ಶರಣಾದವರು.
ತುಮಕೂರು ಮೂಲದ, ಓಂ ಪ್ರಕಾಶ್ ಮೈಸೂರಿನ ದಟ್ಟಗಳ್ಳಿಯಲ್ಲಿ ಮನೆ ಮಾಡಿಕೊಂಡು ಅನಿಮೇಶನ್ ಸಂಸ್ಥೆ ನಡೆಸುತ್ತಿದ್ದರು . ಪತ್ನಿ ನಿಖಿತಾ 8 ತಿಂಗಳ ಗರ್ಭಿಣಿಯಾಗಿದ್ದರು. ಓಂ ಪ್ರಕಾಶ್ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಕುಟುಂಬದ ಜೊತೆ ಸ್ನೇಹಿತರನ್ನೂ ಪ್ರವಾಸದ ನೆಪದಲ್ಲಿ ಕರೆದುಕೊಂಡು ಬಂದಿದ್ದ ಓಂ ಪ್ರಕಾಶ್ ಸ್ನೇಹಿತರಿಗೆ ಬೇರೆ ಕಡೆ ತಂಗಲು ವ್ಯವಸ್ಥೆ ಮಾಡಿದ್ದರು.
ಬುಧವಾರ ಬೆಳಗ್ಗೆ ಗುಂಡ್ಲುಪೇಟೆ ಪಟ್ಟಣದ ಗ್ರೀನ್ ವ್ಯಾಲಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದ ಓಂ ಪ್ರಕಾಶ್ ಮತ್ತು ಕುಟುಂಬ , ತಡರಾತ್ರಿ 2 ಗಂಟೆಯ ವೇಳೆಗೆ ಊಟಿ ರಸ್ತೆಯ ಮಹೇಶ್ ಚಂದ್ರಗುರು ಅವರಿಗೆ ಸೇರಿದ ಜಮೀನಿಗೆ ಬಂದು ಪಿಸ್ತೂಲ್ ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಂದೆ ಹಾಗೂ ಮಗನಿಗೆ ಮೊದಲು ಗುಂಡು ಹೊಡೆದ ಓಂ ಪ್ರಕಾಶ್, ನಂತರ ತಾಯಿ -ಹೆಂಡತಿಗೆ ಗುಂಡಿಕ್ಕಿದ್ದರು. ಕೊನೆಗೆ ತಾವೇ ತನ್ನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಣಕಾಸಿನ ತೊಂದರೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೋಲಿಸರು ಭೇಟಿ ನೀಡಿ ಸೆಕ್ಷನ್ 302, 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .ಈಗಾಗಲೇ ಮೋಹನ್ ನೇತೃತ್ವದಲ್ಲಿ ಒಂದು ತನಿಖಾ ತಂಡ ನೇಮಿಸಲಾಗಿದೆ ಎಂದು ಚಾಮರಾಜನಗರ ಪೋಲಿಸ್ ವರಿಷ್ಠಾಧಿಕಾರಿ ಆನಂದ ಕುಮಾರ್ ಹೇಳಿಕೆ ನೀಡಿದ್ದಾರೆ .