Advertisement

ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದ ಅಜ್ಜಿ!- CM ವಿರುದ್ಧ ಎಚ್‌ಡಿಕೆ ಕಿಡಿ

11:10 PM Jan 14, 2024 | Pranav MS |

ಬೆಂಗಳೂರು: ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ, ಯೋಜನೆಗಳ ಹಣ ಸಕಾಲದಲ್ಲಿ ಸಿಗಬೇಕಾದ ಜನರಿಗೆ ಸಿಗುತ್ತಿದೆಯೇ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

ಈ ಬಗ್ಗೆ ಜಾಲತಾಣ “ಎಕ್ಸ್‌”ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ದಾವಣಗೆರೆ ಜಿಲ್ಲೆಯ ಅಜ್ಜಿಯೊಬ್ಬರ ಚಿತ್ರ ಹಂಚಿಕೊಂಡು, ಆ ಅಜ್ಜಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ. ಆ ಅಜ್ಜಿ ಅನುಭವಿಸಿರುವ ಯಾತನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ. ಸರಕಾರದ ಕ್ಷಮತೆಯನ್ನೂ ಪ್ರಶ್ನಿಸಿದೆ ಎಂದು ಕುಟುಕಿದ್ದಾರೆ.

ಆ ಅಜ್ಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದವರು. ರಸ್ತೆಯ ಬದಿಯಲ್ಲಿ ತೆವಳಿಕೊಂಡು ಸಾಗಿದ ಅಜ್ಜಿಯ ದುಃಸ್ಥಿತಿಯನ್ನು ಕಂಡು ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಇಂಥ ಅಸಕ್ತರನ್ನು ಸರಕಾರ ನಿರ್ಲಕ್ಷ್ಯ ಮಾಡಬಾರದು. ನಿಯಮಿತವಾಗಿ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ, ಸಂತೋಷ. ಆದರೆ ಬಡ, ಅಶಕ್ತ ಮಹಿಳೆಯರಿಗೆ ನೆರವಾಗುವ ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ನಿಯಮಿತವಾಗಿ ಬಿಡುಗಡೆ ಮಾಡಬೇಕು. ಮಾಸಾಶನಕ್ಕಾಗಿ ಈ ಅಜ್ಜಿ 5 ಕಿ.ಮೀ. ತೆವಳಿಕೊಂಡು ಬಂದ ದೃಶ್ಯಗಳು ಪುನರಾವರ್ತನೆ ಆಗಬಾರದು. ಕೂಡಲೇ ಆ ತಾಯಿಗೆ ಸರಕಾರ ಎಲ್ಲ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next