ರಾಯ್‌ಬರೇಲಿ, ಉತ್ತರ ಪ್ರದೇಶ : ಜಿಲ್ಲೆಯ ಆಪ್‌ಟಾ ಗ್ರಾಮದಲ್ಲಿ ಜಮೀನೊಂದರ ಮಾಲಕತ್ವಕ್ಕೆ ಸಂಬಂಧಿಸಿದ ವಿವಾದದ ಪರಾಕಾಷ್ಠೆಯಲ್ಲಿ ಗ್ರಾಮ ಮುಖ್ಯಸ್ಥನ ಸಹಿತ ಮೂವರನ್ನು ಹೊಡೆದು ಚಚ್ಚಿ ಕೊಲ್ಲಲಾಗಿದೆಯಲ್ಲದೆ ಇನ್ನಿಬ್ಬರನ್ನು ಜೀವಂತ ಸುಟ್ಟು ಹಾಕಲಾಗಿದೆ.
ನಿನ್ನೆ ಸೋಮವಾರ ತಡರಾತ್ರಿ ನಡೆದ ಈ ಘಟನೆಯಲ್ಲಿ ತೇವರಾ ಗ್ರಾಮ ಮುಖ್ಯಸ್ಥ ರೋಹಿತ್ ಶುಕ್ಲಾ ಅವರು ತನಗೆ ತನ್ನ ಮಾವನು ಕೊಟ್ಟಿದ್ದ ನಿವೇಶನದಲ್ಲಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಈ ಕೆಲಸಕ್ಕೆ ಆಪ್‌ಟಾ ಗ್ರಾಮದ ಮುಖ್ಯಸ್ಥನ ಮಗನಾದ ರಾಜಾ ಯಾದವ್ ತಡೆಯೊಡ್ಡಿ ಇದು ಗ್ರಾಮಸಭೆಯ ನಿವೇಶನವಾಗಿದೆ ಎಂದು ಹೇಳಿದ.
ಆಗ ರೋಹಿತ್ ಶುಕ್ಲಾ ಆಪಾr ಗ್ರಾಮಕ್ಕೆ ತೆರಳಿ ನಾಲ್ಕು ಮಂದಿಯನ್ನು ಕರೆತಂದು ರಾಜಾ ಯಾದವ್ ಜತೆಗೆ ಮಾತನಾಡಲು ಮುಂದಾದ. ಆಗ ಮಾತಿನ ಜಗಳ ಪರಾಕಾಷ್ಠೆಗೇರಿದಾಗ ರಾಜಾ ಯಾದವ್‌ನ ಸಹೋದರ ಕೃಷ್ಣ ಕುಮಾರ್ ಗುಂಡು ಹಾರಿಸತೊಡಗಿದ.
ಆಗ ರೋಹಿತ್ ಮತ್ತು ಆತನ ಸಹಚರರು ಜೀಪೊಂದರಲ್ಲಿ ಪರಾರಿಯಾಗಲು ಯತ್ನಿಸಿದಾಗ ಅವರ ಜೀಪು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅವರು ರಸ್ತೆಗೆ ಬಿದ್ದರು. ಆಗ ರಾಜಾ ಮತ್ತು ಇತರ ಗ್ರಾಮಸ್ಥರು ದೊಣ್ಣೆಗಳಿಂದ ಅವರ ಮೇಲೆ ಹಲ್ಲೆ ಮಾಡಿದರು. ಪರಿಣಾಮವಾಗಿ ರೋಹಿತ್ ಮತ್ತು ಇನ್ನಿಬ್ಬರು ಸ್ಥಳದಲ್ಲೇ ಸತ್ತರು.
ಒಡನೆಯೇ ಹಲ್ಲೆಕೋರರು ಜೀಪಿಗೆ ಬೆಂಕಿ ಹಚ್ಚಿದರು. ಪರಿಣಾಮವಾಗಿ ಅದರೊಳಗಿದ್ದ ಇಬ್ಬರು ಸಜೀವವಾಗಿ ದಹನಗೊಂಡರು.
ಪೊಲೀಸರು ರಾಜಾ ಯಾದವ್, ಕೃಷ್ಣ ಕುಮಾರ್ ಮತ್ತು ಇನ್ನಿಬ್ಬರನ್ನು ಬಂಧಿಸಿದ್ದಾರೆ. ಗ್ರಾಮದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಉದ್ರಿಕ್ತತೆ ತಲೆ ದೋರಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನಲಾಗಿದೆ.