ಹೊಸದಿಲ್ಲಿ: ಧಾರ್ಮಿಕ ಮೆರವಣಿಗೆಯ ವೇಳೆ ವಿದ್ಯುತ್ ಅಪಘಾತ ಸಂಭವಿಸಿ ಐವರು ಕನ್ವರ್ ಯಾತ್ರಾರ್ಥಿಗಳು ಸಾವನ್ನಪ್ಪಿದ ಘಟನೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆದಿದೆ. ಶನಿವಾರ ನಡೆದ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಮೀರತ್ ಜಿಲ್ಲೆಯ ರಾಲಿ ಚೌಹಾಣ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವನ ಭಕ್ತರಾದ ಕನ್ವರಿಯಾ ಗುಂಪೊಂದು ಹರಿದ್ವಾರದಿಂದ ಬರುತ್ತಿದ್ದಾಗ ಇದು ಸಂಭವಿಸಿದೆ.
ಯಾತ್ರಾರ್ಥಿಗಳಿದ್ದ ವಾಹನದ ಮೇಲೆ ಭಕ್ತಿ ಗೀತೆ ಪ್ರಸಾರವಾಗುತ್ತಿದ್ದ ಮೈಕ್ ಅಳವಡಿಸಲಾಗಿತ್ತು. ಈ ವಾಹನವು ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಅತ್ಯಂತ ಕೆಳ ಸ್ತರದಲ್ಲಿದ್ದ ಹೈವೋಲ್ಟೇಜ್ ವಿದ್ಯುತ್ ಲೈನ್ ಗೆ ಸ್ಪರ್ಷಿಸಿದೆ. ವಾಹನ ಮತ್ತು ಸುತ್ತ ಸೇರಿದ್ದ ಜನರಿಗೆ ವಿದ್ಯುತ್ ಸ್ಪರ್ಷವಾಗುತ್ತಿದ್ದಂತೆ ಒಬ್ಬರಾದ ಮೇಲೆ ಒಬ್ಬರಂತೆ ಉರುಳಿ ಬಿದ್ದರು.
ಇದನ್ನೂ ಓದಿ:Delhi ordinance ಸಂಸತ್ ಅಧಿವೇಶನದಲ್ಲಿ ಆಪ್‌ಗೆ ಕಾಂಗ್ರೆಸ್ ಬೆಂಬಲ?
ಕೂಡಲೇ ಜನರು ವಿದ್ಯುತ್ ಪ್ರಸಾರ ನಿಲ್ಲಿಸುವಂತೆ ಸ್ಥಳೀಯ ಪ್ರಸರಣ ಸಂಸ್ಥೆಗೆ ಕರೆ ಮಾಡಿ ಸೂಚಿಸಿದರೂ ಅದಾಗಲೇ ತಡವಾಗಿತ್ತು. ಯಾತ್ರಾರ್ಥಿಗಳಲ್ಲಿ ಒಬ್ಬನನ್ನು ಮನೀಶ್ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಇನ್ನು ನಾಲ್ವರು ಗಾಯಗೊಂಡು ಸಾವನ್ನಪ್ಪಿದ್ದು, ಇನ್ನೂ ಐವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಈ ದುರಂತವು ಗ್ರಾಮಸ್ಥರಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು, ರಸ್ತೆ ತಡೆದು ಪ್ರತಿಭಟಿಸಿದರು. ಅಪಘಾತಕ್ಕೆ ಕಾರಣರಾದ ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.