ಮಹಾನಗರ: ರಾಜ್ಯ ಸರಕಾರದ ಪ್ರತಿಷ್ಠಿತ ಯೋಜನೆಯಾಗಿರುವ ಮತ್ತು ಬೆಂಗಳೂರಿನಲ್ಲಿ ಈಗಾಗಲೇ ಯಶಸ್ವಿಯಾಗಿರುವ ‘ಇಂದಿರಾ ಕ್ಯಾಂಟೀನ್’ ಮಂಗಳೂರಿನ 5 ಕಡೆಗಳಲ್ಲಿ ಜನವರಿ ಒಂದರಿಂದ ಕಾರ್ಯಾರಂಭಗೊಳ್ಳಲಿದೆ. ಮುಂದಿನ ವಾರದಿಂದ ಇದರ ಕಾಮಗಾರಿ ಆರಂಭಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಪಾಲಿಕೆಯ ತಮ್ಮ ಕೊಠಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಾಹಾರ 5 ರೂ. ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಊಟ 10 ರೂ.ಗಳಲ್ಲಿ ಲಭ್ಯವಾಗಲಿದೆ. ಪಾಲಿಕೆಯ 5,93,291 ಜನಸಂಖ್ಯೆಯ ಆಧಾರದಲ್ಲಿ 6 ಕ್ಯಾಂಟೀನ್ ಹಾಗೂ ಅಡುಗೆ ಕೋಣೆಯನ್ನು ಆರಂಭಿಸಲು ನಿರ್ದೇಶಿಸಲಾಗಿದೆ. ಈ ಪೈಕಿ ಒಂದು ಕ್ಯಾಂಟೀನ್ ಉಳ್ಳಾಲ ನಗರ ಸಭೆಯ ವ್ಯಾಪ್ತಿಯಲ್ಲಿ ಆರಂಭವಾಗಲಿದೆ ಎಂದರು.
ಇಂದಿರಾ ಕ್ಯಾಂಟೀನ್‌ಗೆ ಸಂಬಂದಿಸಿದ ಕಟ್ಟಡಗಳನ್ನು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಕಂಪೆನಿ, ಪೊಲೀಸ್ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಭೂಮಿ ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲು ಅನುಮತಿಸಲಾಗಿದೆ. ಎಲ್ಲ ಕಟ್ಟಡಗಳನ್ನು ಕೆಆರ್‌ಐಡಿಎಲ್ ಮೂಲಕ 2.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗವುದು. ಕ್ಯಾಂಟೀನ್‌ಗಳ ಅನುಷ್ಠಾನ ಹಾಗೂ ಅನಂತರದ ಕಾರ್ಯನಿರ್ವಹಣೆ, ಮೇಲ್ವಿಚಾರಣೆ ಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ನಿರ್ವಹಿಸಲಿದೆ ಎಂದರು.
ಆಹಾರ ಪೂರೈಕೆಗೆ ಪ್ರತಿ ತಿಂಗಳಿಗೆ ತಗಲುವ ಸಹಾಯಧನ ಶೇ. 30ರಷ್ಟು ಕಾರ್ಮಿಕ ಇಲಾಖೆಯಿಂದ ಪಡೆಯಲಾಗುವುದು. ಬಾಕಿ ಶೇ.70ರಷ್ಟು ಸಹಾಯಧನವನ್ನು ಪಾಲಿಕೆಯು ತಮ್ಮ ಸ್ವಂತ ಅನುದಾನದಿಂದ ಭರಿಸಬೇಕಾಗಿದೆ ಎಂದು ಮೇಯರ್ ವಿವರಿಸಿದರು.
ರಾಜ್ಯದ ತಾಲೂಕು ಹಾಗೂ ಜಿಲ್ಲಾ ಕೇಂದ್ರದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕ್ಯಾಂಟೀನ್ ತೆರೆಯಲು ಸರಕಾರ ಅ.23 ರಂದು ಆದೇಶ ಹೊರಡಿಸಿದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಬಡಜನರಿಗೆ ಸಂತುಲಿತ ಆಹಾರವನ್ನು ಕಡಿಮೆ ದರದಲ್ಲಿ ನೀಡುವುದು ಸರಕಾರದ ಉದ್ದೇಶ. ಹೀಗಾಗಿ 173 ನಗರ ಸ್ಥಳೀಯ ಸಂಸ್ಥೆಗಳಲ್ಲಿ 247 ಕ್ಯಾಂಟೀನ್ ಹಾಗೂ 15 ಸಾಮಾನ್ಯ ಅಡುಗೆ ಕೋಣೆ ಪ್ರಾರಂಭಿಸಲು ಸರಕಾರ ಅನುಮೋದನೆ ನೀಡಿದೆ ಎಂದರು. ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಆಯುಕ್ತ ಮಹಮ್ಮದ್ ನಝೀರ್ ಉಪಸ್ಥಿತರಿದ್ದರು.
ನಗರದಲ್ಲಿ ಕ್ಯಾಂಟೀನ್ ನಿರ್ಮಾಣವಾಗುವ ಸ್ಥಳ
1 ಸ್ಟೇಟ್‌ಬ್ಯಾಂಕ್ ಬೀದಿ ಬದಿ ವ್ಯಾಪಾರಿ ವಲಯದ ಸಮೀಪ (ಲೇಡಿಗೋಶನ್ ಮುಂಭಾಗ).
2 ಕಂಕನಾಡಿ ಮಾರುಕಟ್ಟೆ ಸಮೀಪ.
3 ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸಮೀಪ (ಕ್ಯಾಂಟೀನ್ ಹಾಗೂ ಮಾಸ್ಟರ್ ಕಿಚನ್).
4 ಮಂಗಳೂರು ಮುನಿಸಿಪಾಲಿಟಿ ಶಾಲೆ ಕಾವೂರು ಸಮೀಪ.
5 ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್ ಸಮೀಪ.