ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಘೋಷಿಸಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣಕಾಸು ಹೊಂದಾಣಿಕೆ ಜತೆಗೆ ಅರ್ಹ ಫಲಾನುಭವಿಗಳ ಆಯ್ಕೆ ಸವಾಲಾಗಿ ಪರಿಣಮಿಸಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಮಾತ್ರ ಎಂಬ ಷರತ್ತು ವಿಧಿಸಿದರೆ ಇತರ ವರ್ಗದ ಆಕ್ರೋಶಕ್ಕೆ ತುತ್ತಾಗಿ ಲೋಕಸಭೆ ಚುನಾವಣೆಗೆ ಬಿಸಿ ತಟ್ಟುವ ಆತಂಕವೂ ಎದುರಾಗಿದ್ದು, ಪರ್ಯಾಯ ಮಾರ್ಗೋಪಾಯಗಳತ್ತ ಸರಕಾರ ಚಿತ್ತ ಹರಿಸಿದೆ.
ರಾಜ್ಯ ಹಾಗೂ ಕೇಂದ್ರ ಸರಕಾರಿ ನೌಕರರ ಕುಟುಂಬ, ಉದ್ಯಮಿ, ವ್ಯಾಪಾರಸ್ಥ, ಐಟಿ-ಬಿಟಿ ಉದ್ಯೋಗಿಗಳ ಸಹಿತ ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯಿಸುವಂತೆ ಜಾರಿಗೊಳಿಸುವುದು. ಜತೆಗೆ “ಗಿವ್ ಇಟ್ ಅಪ್’ಗೆ (ಆಗತ್ಯ ಇಲ್ಲದವರು ಬಿಟ್ಟುಕೊಡುವ) ಅವಕಾಶ ಕೊಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಹೊರತುಪಡಿಸಿದರೆ ಬಿಪಿಎಲ್-ಎಪಿಎಲ್ ಸೇರಿ ಸುಮಾರು 1.30 ರಿಂದ 1.40 ಕೋಟಿ ಕುಟುಂಬಗಳು ಯೋಜನೆ ವ್ಯಾಪ್ತಿಗೆ ಬರುವ ಅಂದಾಜು ಮಾಡಲಾಗಿದ್ದು, “ಗಿವ್ ಇಟ್ ಅಪ್’ ಅವಕಾಶ ಸೇರಿ ಮಾರ್ಗಸೂಚಿ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ಕು ಗ್ಯಾರಂಟಿಯಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 60 ರಿಂದ 65 ಸಾವಿರ ಕೋ. ರೂ. ಬೃಹತ್ ಮೊತ್ತ ಹೊರೆಯಾಗುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಂದುಕೊಂಡಷ್ಟು ಸುಲಭವಲ್ಲ. ಎಸ್‌ಸಿಪಿ-ಟಿಎಸ್‌ಪಿ ಅನುದಾನ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಡುವ ಅನುದಾನ ಗ್ಯಾರಂಟಿ ಯೋಜನೆ ಗಳಿಗೆ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ನಿಯಮಾವಳಿ ಅಡ್ಡಿಯಾಗುತ್ತವೆ ಎಂಬ ಅಭಿಪ್ರಾಯ ಹಣಕಾಸು ಇಲಾಖೆ ಅಧಿಕಾರಿಗಳ ಸಭೆಯಲ್ಲೂ ವ್ಯಕ್ತ ವಾಗಿದೆ. ಇಲಾಖೆಗಳ ವ್ಯಾಪ್ತಿಯಲ್ಲಿ ಲಭ್ಯ ಇರುವ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ಕೊಂಡರೂ ಸುಮಾರು 30 ಸಾವಿರ ಕೋಟಿ ರೂ. ಹೆಚ್ಚು ವರಿಯಾಗಿ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
3.40 ಲಕ್ಷ ಕೋಟಿ ಬಜೆಟ್?
ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಬೇಕಾಗಿರುವುದರಿಂದ ಕಾಂಗ್ರೆಸ್ ಸರಕಾರ ಮಂಡಿಸಲಿರುವ ಬಜೆಟ್ ಗಾತ್ರವೂ ದೊಡ್ಡದಾಗಲಿದೆ. 3.30ರಿಂದ 3.40 ಲಕ್ಷ ಕೋಟಿ ಮುಟ್ಟಬಹುದು ಎಂದು ಹೇಳಲಾಗಿದೆ. ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ ಹಾಗೂ ಯಾವ್ಯಾವ ಇಲಾಖೆಗಳಿಂದ ಎಷ್ಟೆಷ್ಟು ಹಣಕಾಸು ಲಭ್ಯವಾಗಬಹುದು ಎಂಬ ಬಗ್ಗೆ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.
– ಎಸ್. ಲಕ್ಷ್ಮೀನಾರಾಯಣ