ಮಂಡ್ಯ/ಮದ್ದೂರು: ತಾಲೂಕಿನ ಕೆ. ಕೋಡಿಹಳ್ಳಿ ಬಳಿ ಶುಕ್ರವಾರ ಮುಂಜಾನೆ 5 ಕಾಡಾನೆ ಪ್ರತ್ಯಕ್ಷವಾಗಿವೆ. ಇದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಕೊಂಬಿನಕಲ್ಲು ಅರಣ್ಯ ಪ್ರದೇಶದ ಆನೆ ಕಾರಿಡಾರ್‌ನಿಂದ ಗುರುವಾರ ಮಧ್ಯರಾತ್ರಿ ವಲಸೆ ಬಂದಿರುವ ಮೂರು ಸಲಗ, ಒಂದು ಮರಿ ಸಲಗ, ಒಂದು ಹೆಣ್ಣಾನೆ ಸೇರಿದಂತೆ 5 ಆನೆಗಳ ಹಿಂಡು ಮದ್ದೂರು-ಕೋಡಿಹಳ್ಳಿ ನಡುವಿನ ಶಿಂಷಾ ನದಿಯಲ್ಲಿ ಬೀಡು ಬಿಟ್ಟಿವೆ.
ಆನೆಗಳು ಸಾಗಿಬಂದ ಮಾರ್ಗ ಮಧ್ಯೆ ಸುಮಾರು 5ರಿಂದ 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಹಾಗೂ ಬಾಳೆ ಫಸಲನ್ನು ನಾಶಪಡಿಸಿವೆ. ಕೊಂಬಿನಕಲ್ಲು ಅರಣ್ಯ ಪ್ರದೇಶ ದಿಂದ ಹೊರಟ ಆನೆಗಳ ಹಿಂಡು ಚನ್ನಪಟ್ಟಣ ತಾಲೂಕಿನ ನರಸಿಂಹಸ್ವಾಮಿ ಬೆಟ್ಟದ ಮೀಸಲು ಅರಣ್ಯ ಪ್ರದೇಶ, ಕುಕ್ಕೂರು ಮಾರ್ಗದಿಂದ ಮದ್ದೂರು ತಾಲೂಕಿನ ಬ್ಯಾಡರಹಳ್ಳಿ ಪ್ರವೇಶಿಸಿದ ಆನೆಗಳು, ತೈಲೂರು ಕೆರೆ ಮಾರ್ಗದಿಂದ ಹಾದುಬಂದು ಕೆ. ಕೋಡಿಹಳ್ಳಿ ಸಮೀಪದ ಶಿಂಷಾನದಿಯಲ್ಲಿ ಬೀಡು ಬಿಟ್ಟಿವೆ.
ಮುಂಜಾನೆ ಆನೆಗಳು ಬೀಡು ಬಿಟ್ಟಿದ್ದ ಬಗ್ಗೆ ಗ್ರಾಮಸ್ಥರು ಹೊಲ ಗದ್ದೆ ಪ್ರದೇಶಗಳಲ್ಲಿ ಹಾದು ಹೋಗುತ್ತಿದ್ದನ್ನು ಕಂಡ ಗ್ರಾಮಸ್ಥರು, ರಂಪಾಟ-ಕೂಗಾಟ ಮಾಡಿದ್ದಾರೆ. ಇದರಿಂದ ಬೆದರಿದ ಆನೆಗಳು ಶಿಂಷಾ ನದಿ ನೀರಿನಲ್ಲಿ ಸೇರಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ವಲಯ ಅರಣ್ಯಾಧಿಕಾರಿ ಶಶಿಧರ್, ಉಪ ವಲಯ ಅರಣ್ಯಾಧಿಕಾರಿಗಳಾದ ರವಿ, ರತ್ನಾಕರ್, ಪಿಎಸ್‌ಐ ಮಂಜೇಗೌಡ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ನದಿ ದಡದಲ್ಲಿ ಬೀಡು ಬಿಟ್ಟಿದ್ದು, ಆನೆಗಳ ಚಲನವಲನವನ್ನು ಗಮನಿಸುತ್ತಿದ್ದಾರೆ. ಸಂಜೆ 6 ಗಂಟೆ ನಂತರ ತಮಟೆ ಶಬ್ಧ ಮತ್ತು ಪಟಾಕಿ ಸಿಡಿಸಿ ಆನೆಗಳ ಹಿಂಡನ್ನು ನದಿಯಿಂದ ಹೊರ ಬರುವಂತೆ ಮಾಡಲಾಗುವುದು. ಬಳಿಕ ಅವುಗಳು ಸಾಗಿಬಂದ ಮಾರ್ಗದಲ್ಲಿಯೇ ಕೊಂಬಿನಕಲ್ಲು ಅರಣ್ಯ ಪ್ರದೇಶದ ಆನೆಕಾರಿಡಾರ್ ಪ್ರದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಶಶಿಧರ್ ತಿಳಿಸಿದರು.