ನವದೆಹಲಿ: ದೇಶಾದ್ಯಂತ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಕಳವಳದ ನಡುವೆಯೇ ಆಕ್ಸಿಜನ್ ಕೊರತೆಯಿಂದ ಐವರು ಸಾವನ್ನಪ್ಪಿರುವ ಘಟನೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿರುವ ಆಸ್ಪತ್ರೆಯಲ್ಲಿ ಸೋಮವಾರ(ಏಪ್ರಿಲ್ 26) ಬೆಳಗ್ಗೆ ನಡೆದಿದೆ. ಕಳೆದ 24ಗಂಟೆಗಳಲ್ಲಿ ರಾಜ್ಯದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.
ಇದನ್ನೂ ಓದಿ:ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹತ್ತು ಪೊಲೀಸರಿಗೆ ಕೋವಿಡ್ ಸೋಂಕು ದೃಢ
ಆಕ್ಸಿಜನ್ ಕೊರತೆಯಿಂದ ಐವರು ಸಾವನ್ನಪ್ಪಿರುವ ಘಟನೆ ಬಳಿಕ ಆಸ್ಪತ್ರೆ ಮುಂಭಾಗದಲ್ಲಿ ಸಂತ್ರಸ್ತರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ. ಗುರ್ಗಾಂವ್ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ರೇವಾರಿ ಆಸ್ಪತ್ರೆಯಲ್ಲಿ ಒಬ್ಬರು ಸೇರಿದಂತೆ ಒಟ್ಟು ಐವರು ಆಕ್ಸಿಜನ್ ಕೊರತೆಯಿಂದ ಸಾನ್ನಪ್ಪಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ತನಿಖೆ ನಡೆಸಲು ಆದೇಶ ನೀಡಲಾಗಿದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ದಿನದಿಂದ ಹೆಚ್ಚಳವಾಗತೊಡಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಆಕ್ಸಿಜನ್ ಕೊರತೆಯಿಂದ 25 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿತ್ತು.
ಹರ್ಯಾಣದಲ್ಲಿಯೂ ಕೋವಿಡ್ ಸೋಂಕು ಪ್ರಕರಣ ಕ್ಷಿಪ್ರವಾಗಿ ಹೆಚ್ಚಳವಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ ದಾಖಲೆಯ 10 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಹರ್ಯಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 4,24 ಲಕ್ಷಕ್ಕೆ ಏರಿಕೆಯಾಗಿದೆ.
ಕೋವಿಡ್ ಸೋಂಕು ಹಾಗೂ ಆಕ್ಸಿಜನ್ ಕೊರತೆಯಿಂದಾಗುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹರ್ಯಾಣದ ಮುಖ್ಯ ಕಾರ್ಯದರ್ಶಿ ವಿಜಯ್ ವರ್ಧನ್ ಅವರು, ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್ ಸರಬರಾಜು ಮಾಡಲು ಹಿರಿಯ ಅಧಿಕಾರಿಗಳ ಮಟ್ಟದ ಸಮಿತಿಯನ್ನು ರಚಿಸುವಂತೆ ಡೆಪ್ಯುಟಿ ಕಮಿಷನರ್ ಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.