ಲಕ್ನೋ: ಮಾನವಸಹಿತ ಲೆವೆಲ್ ಕ್ರಾಸಿಂಗ್ ನಲ್ಲಿ ಗೇಟುಗಳನ್ನು ಬಂದ್ ಮಾಡದ ಪರಿಣಾಮ ರೈಲು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಮಿರಾನ್ ಪುರ್, ಕಟ್ರಾ ರೈಲ್ವೆ ನಿಲ್ದಾಣ ಸಮೀಪ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋ- ಚಂಡೀಗಢ್ ಸೂಪರ್ ಫಾಸ್ಟ್ ರೈಲು ವಾಹನಗಳಿಗೆ ಡಿಕ್ಕಿ ಹೊಡೆದು ಹಳಿತಪ್ಪಿದ್ದು, ಇದರಿಂದಾಗಿ ಸುಮಾರು ಆರು ಗಂಟೆಗಳ ಕಾಲ ರೈಲು ಸಂಚಾರ ಬಂದ್ ಮಾಡಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಬಾಜಪೈ ತಿಳಿಸಿದ್ದಾರೆ.
ಮಾನವಸಹಿತ ಲೆವೆಲ್ ಕ್ರಾಸಿಂಗ್ ನಲ್ಲಿ ಗೇಟುಗಳನ್ನು ಬಂದ್ ಮಾಡದ ಪರಿಣಾಮ ಮಿರಾನ್ ಪುರ್ ಕಟ್ರಾ ರೈಲು ವೇಗವಾಗಿ ಬಂದಿದ್ದು, ಎರಡು ಲಾರಿ, ಒಂದು ಕಾರು, ಒಂದು ಬೈಕ್ ಗೆ ಡಿಕ್ಕಿ ಹೊಡೆದಿರುವುದಾಗಿ ಪಿಟಿಐ ವರದಿ ಮಾಡಿದೆ. ಇಂದು ಮುಂಜಾನೆ 5.10ರ ಸಮಯಕ್ಕೆ ರೈಲು ಕಟ್ರಾದ ಹುಲಾಸ್ ನಾಗ್ಲಾ ಕ್ರಾಸಿಂಗ್ ಬಳಿ ಬಂದಾಗ ರೈಲ್ವೆ ಹಳಿ ಸಮೀಪ ವಾಹನಗಳು ಇದ್ದಿರುವುದನ್ನು ರೈಲು ಚಾಲಕ ಗಮನಿಸಿದ್ದು, ಎಮರ್ಜೆನ್ಸಿ ಬ್ರೇಕ್ ಅನ್ನ ಹಾಕಿದ್ದರು. ಆದರೂ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುವುದಾಗಿ ಜಿಲ್ಲಾಧಿಕಾರಿ ಇಂದ್ರಾ ವಿಕ್ರಂ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ರೈಲ್ವೆ ಇಲಾಖೆಯ ಮೂವರು ಇಂಜಿನಿಯರ್ ಅನ್ನು ಒಳಗೊಂಡ ತಂಡವನ್ನು ನೇಮಕ ಮಾಡಲಾಗಿದೆ ಎಂದು ವರದಿ ವಿವರಿಸಿದೆ. ರೈಲ್ವೆ ಹಳಿಗಳ ದುರಸ್ತಿಯ ನಂತರ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.