Advertisement

Army: 5 ದಿನ ಕಳೆದರೂ ಉಗ್ರರ ಸುಳಿವಿಲ್ಲ!- ಅನಂತ್‌ನಾಗ್‌ನಲ್ಲಿ ಮುಂದುವರಿದ ಕಾರ್ಯಾಚರಣೆ

08:29 PM Sep 17, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಭಾನುವಾರ 5ನೇ ದಿನ ಪೂರೈಸಿದೆ.

Advertisement

ಪ್ಯಾರಾ ಕಮಾಂಡೋಗಳು ಸೇರಿದಂತೆ ಸಾವಿರಾರು ಯೋಧರು ನಿರಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಗಡೋಲ್‌ನ ದಟ್ಟ ಅರಣ್ಯದೊಳಗೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಆದರೆ, “ಅರಣ್ಯ ಯುದ್ಧ’ದಲ್ಲಿ ತರಬೇತಿ ಪಡೆದಿರುವ ಉಗ್ರರು ಮಾತ್ರ ಇನ್ನೂ ಸಿಕ್ಕಿಲ್ಲ.

ಮೂವರು ಯೋಧರನ್ನು ಹತ್ಯೆಗೈದು ಅರಣ್ಯದಲ್ಲಿ ಅವಿತಿರುವ ಉಗ್ರರ ಹೆಡೆಮುರಿ ಕಟ್ಟಲು ಬುಧವಾರದಿಂದಲೇ ಸೇನೆ ಪಣತೊಟ್ಟಿದೆ. ಕಾರ್ಯಾಚರಣೆ ಅವಧಿ 100 ಗಂಟೆ ದಾಟಿದೆ. ಇಬ್ಬರಿಂದ ಮೂವರು ಶಸ್ತ್ರಸಜ್ಜಿತ ಉಗ್ರರು ಇಲ್ಲಿ ಅಡಗಿರುವ ಶಂಕೆಯಿದೆ. ಈಗಾಗಲೇ ನೂರಾರು ಮೋರ್ಟಾರ್‌ ಶೆಲ್‌ಗ‌ಳು, ರಾಕೆಟ್‌ಗಳನ್ನು ಫೈರ್‌ ಮಾಡಿ ಉಗ್ರರ ಪತ್ತೆಗೆ ಯತ್ನಿಸಲಾಗಿದೆ. ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ಹೈಟೆಕ್‌ ಸಾಧನಗಳನ್ನೂ ಬಳಸಲಾಗಿದೆ. ಅರಣ್ಯದಲ್ಲಿ ಹಲವು ಗುಹೆ ಮಾದರಿಯ ಅಡಗುತಾಣಗಳಿದ್ದು, ಶೆಲ್‌ ದಾಳಿ ವೇಳೆ ಒಬ್ಬ ಉಗ್ರ ರಕ್ಷಣೆಗಾಗಿ ಓಡುತ್ತಿರುವ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದೂ ಸೇನೆ ತಿಳಿಸಿದೆ.

ಜಮ್ಮು-ಕಾಶ್ಮೀರಕ್ಕೆ ಹೊಸ ಸವಾಲು
ದಟ್ಟಾರಣ್ಯಗಳು ಮತ್ತು ಎತ್ತರದ ಪ್ರದೇಶಗಳಲ್ಲೂ ಯುದ್ಧ ಮಾಡುವಂಥ ತರಬೇತಿ ಪಡೆದಿರುವ ಉಗ್ರರೇ ಈಗ ಜಮ್ಮು ಮತ್ತು ಕಾಶ್ಮೀರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಇಂಥ ಉಗ್ರವಾದವನ್ನು ಸಮರ್ಥವಾಗಿ ಎದುರಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ಭದ್ರತಾ ಪರಿಣತರು. ಅನಂತ್‌ನಾಗ್‌ನಲ್ಲಿ 5ನೇ ದಿನವೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿರುವಂತೆಯೇ ತಜ್ಞರಿಂದ ಇಂಥದ್ದೊಂದು ಅಭಿಪ್ರಾಯ ಹೊರಬಿದ್ದಿದೆ. ಕಳೆದ 2 ವರ್ಷಗಳಲ್ಲಿ ರಜೌರಿ ಮತ್ತು ಪೂಂಛ್‌ ಜಿಲ್ಲೆಗಳಲ್ಲಿ ಉಗ್ರರು ಇದೇ ಕಾರ್ಯತಂತ್ರವನ್ನು ಬಳಸಿಕೊಂಡು ಬಂದಿದ್ದಾರೆ. ಮೇ 5ರಂದು ಇದೇ ರೀತಿಯ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.

2021ರಲ್ಲಿ ದಟ್ಟಾರಣ್ಯದಲ್ಲಿ ಸತತ 3 ವಾರಗಳ ಕಾಲ ಕಾರ್ಯಾಚರಣೆ ನಡೆಸಿದರೂ ಉಗ್ರರು ಪತ್ತೆಯಾಗಿರಲಿಲ್ಲ. ಅಲ್ಲದೇ, ಈ ಕಾರ್ಯಾಚರಣೆಯಲ್ಲೇ 9 ಯೋಧರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಉಗ್ರರು ಎತ್ತರದ-ಕಡಿದಾದ ಪ್ರದೇಶಗಳಲ್ಲಿ, ದಟ್ಟಡವಿಯಲ್ಲಿ ಯುದ್ಧ ಮಾಡುವ ಛಾತಿ ಹೊಂದಿರುತ್ತಾರೆ. ಅಂಥ ಸ್ಥಳಗಳಿಗೆ ಶಸ್ತ್ರಾಸ್ತ್ರಗಳನ್ನು ಒಯ್ಯುವುದೂ ಕಷ್ಟ. ಜತೆಗೆ, ಅರಣ್ಯದೊಳಗಿನ ನೈಸರ್ಗಿಕ ಗುಹೆಗಳಲ್ಲಿ ಉಗ್ರರು ಅಡಗುವ ಕಾರಣ, ಪತ್ತೆಯೂ ಕಷ್ಟಸಾಧ್ಯ ಎನ್ನುತ್ತಾರೆ ತಜ್ಞರು.

Advertisement
Advertisement

Udayavani is now on Telegram. Click here to join our channel and stay updated with the latest news.

Next