Advertisement

5 ದಿನಗಳ 62ನೇ ರಾಷ್ಟ್ರಮಟ್ಟದ ಟೆನ್ನಿಸ್‌ ಪಂದ್ಯಾವಳಿ

12:18 PM Jan 18, 2017 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭಗೊಂಡಿರುವ 5 ದಿನಗಳ 62ನೇ ರಾಷ್ಟ್ರಮಟ್ಟದ ಟೆನ್ನಿಸ್‌ ಪಂದ್ಯಾವಳಿ ಶಾಲಾ ಬಾಲಕ ಮತ್ತು ಬಾಲಕಿಯರ ಟೆನ್ನಿಸ್‌ ಪಂದ್ಯಾವಳಿಗೆ ಮಂಗಳವಾರ ಚಾಲನೆ ದೊರೆಯಿತು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ನಗರದ ಚಾಮರಾಜಪುರಂನಲ್ಲಿರುವ ಮೈಸೂರು ಟೆನ್ನಿಸ್‌ ಕ್ಲಬ್‌ನಲ್ಲಿ ಆಯೋಜಿಸಿರುವ ಟೆನ್ನಿಸ್‌ ಪಂದ್ಯಾವಳಿಗೆ ಶಾಸಕ ವಾಸು ಚಾಲನೆ ನೀಡಿದರು.

ನಂತರ ಮಾತನಾಡಿ, ಮೈಸೂರು ಮಹಾರಾಜರ ಕಾಲದಿಂದಲೂ ಕ್ರೀಡೆಗೆ ಪ್ರೋತ್ಸಾಹ ದೊರಕುತ್ತಿದ್ದು, ಇದೀಗ ಮತ್ತೂಂದು ಐತಿಹಾಸಿಕ ಕ್ರೀಡೆಗೆ ಸಜಾjಗಿದೆ. ಅದರಂತೆ ನಗರದಲ್ಲಿ ರಾಷ್ಟ್ರಮಟ್ಟದ ಟೆನ್ನಿಸ್‌ ಪಂದ್ಯಾವಳಿ ಆಯೋಜಿಸಲು ಅವಕಾಶ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ.

ವಿದ್ಯಾರ್ಥಿಗಳು ಈಗಾಗಲೇ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಇದೀಗ ರಾಷ್ಟ್ರಮಟ್ಟದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ದೇಶದ ಬೇರೆ, ಬೇರೆ ರಾಜ್ಯಗಳಿಂದ ಶಾಲಾ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

 ಶಾಲಾ ಮಕ್ಕಳ 14ರಿಂದ 17 ವರ್ಷದೊಳಗಿನ ಬಾಲಕ / ಬಾಲಕಿಯರ ಪಂದ್ಯಾವಳಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಶಾಲಾಗಳ ಹಾಗೂ ಸಿಬಿಎಸ್‌ಸಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.

Advertisement

ಉದ್ಘಾಟನಾ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಟೆನ್ನಿಸ್‌ ಕ್ಲಬ್‌ ಅಧ್ಯಕ್ಷ ಅಲಗಪ್ಪನ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸಪ್ಪ, ದೈಹಿಕ ಶಿಕ್ಷಣಾಧಿಕಾರಿ ಸಿ.ಮರಿಯಪ್ಪ ಮತ್ತಿತರರು ಹಾಜರಿದ್ದರು.

ಬಾಲಕಿಯರ ವಿಭಾಗ
ಪಂದ್ಯಾವಳಿಯ ಮೊದಲ ದಿನದಂದು ನಡೆದ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸುತ್ತಿನ ಪಂದ್ಯದಲ್ಲಿ ಛತ್ತಿಸ್‌ಗಡ 2-1 ಅಂತರದಲ್ಲಿ ಹರಿಯಾಣವನ್ನು ಮಣಿಸಿತು. 2ನೇ ಪಂದ್ಯದಲ್ಲಿ ಆಂಧ್ರಪ್ರದೇಶ 2-0 ಅಂತರದಲ್ಲಿ ಪಾಂಡಿಚೇರಿಯನ್ನು ಪರಾಭವಗೊಳಿಸಿತು.

3ನೇ ಪಂದ್ಯದಲ್ಲಿ ತಮಿಳುನಾಡು 2-0 ಅಂತರದಲ್ಲಿ ವಿದ್ಯಾಭಾರತಿ ತಂಡವನ್ನು ಸೋಲಿಸಿತು. ನಂತರ ನಡೆದ ಬಾಲಕಿಯರ 14 ವರ್ಷದೊಳಗಿನ ವಿಭಾಗದಲ್ಲಿ ಆಂಧ್ರಪ್ರದೇಶ 2-0 ಅಂಕದೊಂದಿಗೆ ದೆಹಲಿಯನ್ನು ಮಣಿಸಿತು. ಸಿಬಿಎಸ್‌ಸಿ ತಂಡ 2-0 ಅಂತರದಲ್ಲಿ ಅತಿಥೇಯ ಕರ್ನಾಟಕವನ್ನು ಸೋಲಿಸಿತು. ಮತ್ತೂಂದು ಪಂದ್ಯದಲ್ಲಿ ತೆಲಂಗಾಣ 2-0 ಅಂಕದೊಂದಿಗೆ ಛತ್ತಿಸ್‌ಗಡ ತಂಡವನ್ನು ಪರಾಭವಗೊಳಿಸಿತು.

ಬಾಲಕರ ವಿಭಾಗ
ಬಾಲಕರ 17 ವರ್ಷದೊಳಗಿನ ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ 2-0 ಅಂತರದಲ್ಲಿ ಸಿಬಿಎಸ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು. 2ನೇ ಪಂದ್ಯದಲ್ಲಿ ಕೆವಿಎಸ್‌ 2-0 ಅಂಕದೊಂದಿಗೆ ಆಂಧ್ರಪ್ರದೇಶವನ್ನು ಹಾಗೂ ಚಂಡಿಗಢ 2-1 ಅಂತರದಲ್ಲಿ ರಾಜಸ್ಥಾನವನ್ನು ಸೋಲಿಸಿತು.

ಇನ್ನೂ ಬಾಲಕರ 14 ವರ್ಷದೊಳಗಿನ ವಿಭಾಗದಲ್ಲಿ ಮಹರಾಷ್ಟ್ರ 2-0 ಅಂಕದೊಂದಿಗೆ ಕೇರಳ ತಂಡವನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಹರಿಯಾಣ 2-0 ಅಂತದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿದರೆ, 3ನೇ ಪಂದ್ಯದಲ್ಲಿ ಛತ್ತಿಸ್‌ಗಡ ತಂಡ 2-1 ವಿದ್ಯಾಭಾರತಿಯನ್ನು ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next