ನವಲಗುಂದ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದೆ. ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳಿಗೆ 5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಡಿಸಿ ನಿತೇಶ್ ಕೆ. ಪಾಟೀಲ ಹೇಳಿದರು.
ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳಗಳು ಉಕ್ಕಿ ಹರಿದು ನೆರೆ ಹಾವಳಿ ಎದುರಿಸುವ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ನಾಲೆ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು. ಭಾಗಶಃ ಮತ್ತು ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ ಪರಿಹಾರವನ್ನು ಒದಗಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಜಿಲ್ಲಾಡಳಿತವು ಅದನ್ನು ಹಾನಿಗೀಡಾದವರನ್ನು ಗುರುತಿಸಿ, ಅವರ ಖಾತೆಗೆ ಜಮೆ ಮಾಡಲಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳೆ ಸಮೀಕ್ಷೆ ಚುರುಕುಗೊಳಿಸಿ ಹಾನಿಯ ಅಂದಾಜು ಮಾಡಲಾಗುವುದು ಎಂದರು.
ವಿವಿಧೆಡೆ ಡಿಸಿ ಭೇಟಿ: ಯಮನೂರು ಗ್ರಾಮದ ಬಳಿ ಬೆಣ್ಣೆಹಳ್ಳದಿಂದ ಉಂಟಾಗುವ ಪರಿಸ್ಥಿತಿ, ಅಮರಗೋಳ ಗ್ರಾಮದ ಬಳಿಯ ನರಗುಂದ ಸೇತುವೆ, ಗೊಬ್ಬರಗುಂಪಿ, ಅಳಗವಾಡಿ, ಹೆಬ್ಟಾಳ, ಜಾವೂರ, ಹನಸಿ, ಶಿರಕೋಳ ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿ ಮತ್ತು ಹಳ್ಳ, ಕೊಳ್ಳಗಳನ್ನು ವೀಕ್ಷಿಸಿದ ಡಿಸಿ ಪಾಟೀಲ, ಹನಸಿ-ಶಿರಕೋಳ ಮಧ್ಯೆ ತುಪ್ಪರಿಹಳ್ಳದ ಹರಿವಿನಿಂದ ಹಾನಿಗೀಡಾಗಿರುವ ರಸ್ತೆಯ ದುರಸ್ತಿಗೆ ಅನುದಾನ ಲಭ್ಯವಿದೆ. ಕೂಡಲೇ ಒದಗಿಸುವುದಾಗಿ ಭರವಸೆ ನೀಡಿದರು. ನಂತರ ಹನಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪರಿಹಾರ ಕೇಂದ್ರ ಸ್ಥಾಪನೆಗೆ ಸಿದ್ಧತೆ ಮಾಡಿಕೊಂಡು, ಸ್ಥಳೀಯ ನೋಡಲ್ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಲು ಸೂಚಿಸಿದರು.
ನವಲಗುಂದ ತಾಲೂಕಿನಲ್ಲಿ ಸುಮಾರು 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿದೆ. ಇದರಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಕೃಷಿ ಬೆಳೆ ಅತಿವೃಷ್ಟಿಗೆ ಹಾನಿಯಾಗಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವಿವರಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ. ಅತಿವೃಷ್ಟಿ ಬಾಧಿತವಾಗುವ ಜಿಲ್ಲೆಯ 83 ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರವಾಹ ಎದುರಾದರೆ ಜನರ ಸ್ಥಳಾಂತರಕ್ಕೆ ಪರಿಹಾರ ಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ. ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. –
ನಿತೇಶ್ ಕೆ.ಪಾಟೀಲ, ಜಿಲ್ಲಾಧಿಕಾರಿ