ವಾಡಿ: ಪಟ್ಟಣದಲ್ಲಿ ಮಂಡಲ ಪಂಚಾಯತಿ ಆಡಳಿತ ಕೊನೆಗೊಂಡು ಪುರಸಭೆ ಆಡಳಿತ ಜಾರಿಯಾದ 20 ವರ್ಷಗಳ ನಂತರ ನಗರದ ಬಡಾವಣೆಗಳು ಮತ್ತು ಪ್ರಮುಖ ರಸ್ತೆಗಳು ಅಧಿಕೃತ ಬೀದಿ ದೀಪಗಳ ಬೆಳಕು ಕಾಣುವ ಭಾಗ್ಯ ಬಂದೊದಗಿದೆ.
ಪಟ್ಟಣಕ್ಕೆ ಅತ್ಯವಶ್ಯಕವಾಗಿ ಬೇಕಿರುವ ಬೀದಿದೀಪ ಹಾಗೂ ಪುಟ್‌ಪಾತ್ ವ್ಯವಸ್ಥೆಗಾಗಿ ವಿಶೇಷ ಅನುದಾನ ನೀಡುವಂತೆ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಪುರಸಭೆಯ ಕಾಂಗ್ರೆಸ್ ಆಡಳಿತ ಮಾಡಿಕೊಂಡ ಮನವಿಗೆ ಸ್ಪಂದನೆ ದೊರಕಿದ್ದು, ಪಿಡಬ್ಲುಡಿ ಇಲಾಖೆಯಿಂದ 4.85 ಕೋಟಿ ರೂ. ಮಂಜೂರಾಗಿದೆ. ಸದ್ಯ 2.35 ಕೋಟಿ ರೂ. ವೆಚ್ಚದಲ್ಲಿ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಿಂದ ಮುಖ್ಯ ರಸ್ತೆ ವರೆಗೆ, ರೈಲು ನಿಲ್ದಾಣದಿಂದ ಅಂಬೇಡ್ಕರ್ ವೃತ್ತ ಮತ್ತು ರೈಲ್ವೆ ಕಾಲೋನಿ ವರೆಗೆ, ಶಿವಾಜಿ ಚೌಕ್‌ದಿಂದ ಅಂಬೇಡ್ಕರ್ ವೃತ್ತ ಹಾಗೂ ವಾರ್ಡ್-20 ಬಿಯ್ನಾಬಾನಿ ಬಡಾವಣೆಯಲ್ಲಿ ಬೀದಿ ದೀಪಗಳ ಕಂಬ ಅಳವಡಿಕೆ ಕಾರ್ಯ ಸೇರಿದಂತೆ ಕುಂದನೂರು ಚೌಕ್‌ದಿಂದ ಚೌಡೇಶ್ವರ ಕಾಲೋನಿಯ ಸಾರ್ವಜನಿಕ ಶೌಚಾಲಯದ ವರೆಗೆ ಪುಟ್‌ಪಾತ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಪಿಡಬ್ಲ್ಯುಡಿ ಇಲಾಖೆಯ ಇನ್ನುಳಿದ 2.50 ಕೋಟಿ ರೂ. ವೆಚ್ಚದಲ್ಲಿ ಬಳವಡಗಿ ಗ್ರಾಮದ ರಸ್ತೆಯಿಂದ ಶ್ರೀನಿವಾಸ ಗುಡಿ ವೃತ್ತದ ವರೆಗಿನ ನಗರದ ಪ್ರಮುಖ ರಸ್ತೆಯ ಅಗಲೀಕರಣ ಹಾಗೂ ಎರಡೂ ಬದಿಯಲ್ಲಿ ಪುಟ್‌ಪಾತ್ ನಿರ್ಮಾಣಕ್ಕೆ ಪುರಸಭೆ ಅಧಿ ಕಾರಿಗಳು ನೀಲನಕ್ಷೆ ಸಿದ್ಧಪಡಿಸಿದ್ದಾರೆ. ರಸ್ತೆ ಉದ್ದಕ್ಕೂ ಸಾಲಾಗಿ ವಿದ್ಯುತ್ ದೀಪ ಅಳವಡಿಸುವ ಮೂಲಕ ದ್ವಿಪಥ ರಸ್ತೆಯನ್ನಾಗಿ ಮಾರ್ಪಡಿಸಲಾಗುತ್ತಿದೆ.
ವಾಡಿ ನಗರದ ಸೌಂದರ್ಯ ಹೆಚ್ಚಿಸುವ ಈ ಮಹತ್ವದ ಕಾರ್ಯವನ್ನು ಶಾಸಕರ ಗಮನಕ್ಕೆ ತಂದು ಚಾಲನೆ ನೀಡಲಾಗುವುದು ಎಂದು ಪುರಸಭೆಯ ಗ್ರೇಡ್-1 ಮುಖ್ಯಾಧಿಕಾರಿ ಡಾ| ಚಿದಾನಂದಸ್ವಾಮಿ ಹಾಗೂ ಕಿರಿಯ ಅಭಿಯಂತರ ಅಶೋಕ ಪುಟ್‌ಪಾಕ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಕಾರ್ಮಿಕರು ಹೆಚ್ಚಿರುವ ವಾಡಿ ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ಕೆಲವು ರಸ್ತೆ ಮತ್ತು ಬಡಾವಣೆಗಳು ಉತ್ತಮ ಬೀದಿ ದೀಪದ ಬೆಳಕಿನ ಸೌಲಭ್ಯದಿಂದ ವಂಚಿತವಾಗಿದ್ದವು. ಜನರ ಬೇಡಿಕೆಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಬೀದಿ ದೀಪ, ರಸ್ತೆ ಅಗಲೀಕರಣ ಮತ್ತು ಪುಟ್‌ಪಾತ್ ನಿರ್ಮಾಣಕ್ಕಾಗಿ ಶಾಸಕರು ಅನುದಾನ ನೀಡಿದ್ದರಿಂದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿವೆ. ಡಿಸೆಂಬರ್ ಒಳಗಾಗಿ ಶಾಸಕ ಪ್ರಿಯಾಂಕ್ ಖರ್ಗೆ ಮುಖ್ಯ ರಸ್ತೆ ಅಗಲೀಕರಣ, ಪುಟ್‌ಪಾತ್ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಿದ್ದಾರೆ.
–ಝರೀನಾಬೇಗಂ. ಅಧ್ಯಕ್ಷ, ಪುರಸಭೆ