ಬೆಂಗಳೂರು: ಹಜ್ ಭವನ ಅಭಿವೃದ್ಧಿಗೆ 5 ಕೋಟಿ ರೂ.ಅನುದಾನ ನೀಡುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಹಜ್‌ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಿಕರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಮುಂಬರುವ ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಸರ್ಕಾರ ದೇಶದ ಎಲ್ಲಾ ಮುಸ್ಲಿಮರ ಜೊತೆಗಿದೆ. ಬೀದರ್, ಕಲಬುರ್ಗಿ, ಯಾದಗಿರಿ ಮತ್ತು ರಾಯಚೂರ ಜಿಲ್ಲೆಗಳ ಯಾತ್ರಿಗಳು ಹೈದರಾಬಾದ್‌ನಲ್ಲಿರುವ ಹಜ್ ಕೇಂದ್ರದಿಂದ ಪ್ರಯಾಣ ಬೆಳೆಸಲಿದ್ದಾರೆಂದರು. ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿರುವುದರಿಂದ ಈ ಜಿಲ್ಲೆಗಳ ಯಾತ್ರಿಕರು ಕಲಬುರಗಿ ವಿಮಾನ ನಿಲ್ದಾಣದಿಂದ, ಸೌದಿ ಅರೇಬಿಯಾಕ್ಕೆ ತೆರಳಲು ಸಹಾಯವಾಗಲಿದೆ.
ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ಪೌರತ್ವ ತಿದ್ದುಪಡೆ ಕಾಯ್ದೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಇದಕ್ಕೆ ಕಿವಿಗೊಡಬೇಡಿ ಎಂದು ಮುಸ್ಲಿಂ ಸಮುದಾಯದಲ್ಲಿ ಮನವಿ ಮಾಡಿದರು.
ಕಲಬುರಗಿಯಲ್ಲಿ ಹಜ್ ಭವನ: ಪಶು ಸಂಗೋಪನೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಖಾತೆ ಸಚಿವ ಪ್ರಭು ಚವ್ಹಾಣ್, ಕಲಬುರಗಿಯಲ್ಲಿ ಹಜ್ ಭವನ ನಿರ್ಮಿಸುವ ಚಿಂತನೆ ಇದೆ. ಆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಆಯವ್ಯಯದಲ್ಲಿ 1 ಕೋಟಿ ರೂ.ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.
ದೇಶದ ಭದ್ರತೆ ದೃಷ್ಟಿಯಿಂದ ರೂಪಿಸಲಾದ ಸಿಎಎ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಲವರು ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರಿನ ಮಾದರಿಯಲ್ಲಿಯೇ ಮಂಗಳೂರಿನ ಯಾತ್ರಿಗಳಿಗೆ ಅನುವಾಗುವಂತೆ ಹಜ್ ಭವನ ನಿರ್ಮಾಣ ಮಾಡಲು ಸರ್ಕಾರ ಭೂಮಿ ಮಂಜೂರು ಮಾಡಿದೆ ಎಂದು ತಿಳಿಸಿದರು.
ಹಜ್ ಯಾತ್ರೆಗೆ ಆಯ್ಕೆ: ಈ ಸಾಲಿನ ಹಜ್ ಯಾತ್ರೆಗೆ 14 ಮಕ್ಕಳು ಸೇರಿ 9869 ಅರ್ಜಿಗಳನ್ನು ರಾಜ್ಯ ಹಜ್ ಸಮಿತಿಯಿಂದ ಸ್ವೀಕರಿಸಿತ್ತು. 70 ವರ್ಷಕ್ಕೂ ಮೇಲ್ಪಟ್ಟ 459 ಜನ ಹಾಗೂ ಪದ್ಧತಿಯಂತೆ 45 ವರ್ಷ ಮೇಲ್ಪಟ್ಟು 32 ಮಹಿಳೆಯರು ಈ ಬಾರಿಯ ಹಜ್ ಯಾತ್ರೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೋಷನ್ ಬೇಗ್, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಮತ್ತಿತರರಿದ್ದರು.