Advertisement

ವಿದ್ಯಾರ್ಥಿಗಳು ಓದಲೇಬೇಕಾದ 5 ಪುಸ್ತಕಗಳು

10:48 PM Jul 30, 2019 | mahesh |

ವಿದ್ಯಾರ್ಥಿ ಜೀವನ ಎನ್ನುವುದು ಸುಂದರ ಭವಿಷ್ಯ ನಿರ್ಮಾಣದ ತಯಾರಿ. ಇದನ್ನು ನಾವು ಸದುಪಯೋಗಿಸಿಕೊಂಡರೆ ಅಂದುಕೊಂಡಿರುವ ಗುರಿಯನ್ನು ತಲುಪಬಹುದು. ವಿದ್ಯಾರ್ಥಿಗಳು ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ವಿವಿಧ ಕೌಶಲಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಜೀವನಕ್ಕೆ ಸ್ಫೂರ್ತಿ ತುಂಬಬಲ್ಲ ಪುಸ್ತಕಗಳನ್ನು ಓದಬೇಕು ಎನ್ನುತ್ತಾರೆ ಶಿಕ್ಷಣ ತಜ್ಞರು. ವಿದ್ಯಾರ್ಥಿ ಗಳು ಓದಲೇ ಬೇಕಾದ 5 ಪುಸ್ತಕಗಳ ವಿವರ ಇಲ್ಲಿದೆ.

Advertisement

ರಾಷ್ಟ್ರ ಜಾಗೃತಿ
ಸ್ವಾಮಿ ವಿವೇಕಾ ನಂದರ 150ನೇ ಜನ್ಮ ಮಹೋತ್ಸವದ ಪ್ರಯುಕ್ತ ಪ್ರಕಟಿಸಲಾದ ಕಿರು ಹೊತ್ತಗೆ ರಾಷ್ಟ್ರ ಜಾಗೃತಿ. ಇದು ಸ್ವಾಮಿ ವಿವೇಕಾನಂದರ ಜೀವನ ಮತ್ತು ಉಪದೇಶಗಳನ್ನು ಒಳಗೊಂಡಿದೆ. ಈ ಪ್ರೇರಕ ನುಡಿಗಳು ಯುವ ಜನರಲ್ಲಿ ಸ್ಫೂರ್ತಿ ತುಂಬಬಲ್ಲದು. ಸಮಸ್ಯೆಗಳನ್ನು ಎದುರಿಸುವ ಧೈರ್ಯ ನೀಡಬಲ್ಲದು. ಇದರಲ್ಲಿನ ನುಡಿಗಳನ್ನು ಒಂಬತ್ತು ಸಂಪುಟಗಳಲ್ಲಿ ಪ್ರಕಟವಾದ “ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ’ಯಿಂದ ಆಯ್ದುಕೊಳ್ಳಲಾಗಿದೆ.

ಗೃಹಭಂಗ
ಡಾ| ಎಸ್‌.ಎಲ್‌.ಭೈರಪ್ಪ ಭಾರತದಲ್ಲೇ ವಿಶಿಷ್ಟ ಲೇಖಕ. ಅವರ ಹೆಚ್ಚಿನ ಎಲ್ಲ ಕೃತಿಗಳು ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡು ಜನಪ್ರಿಯ ವಾಗಿವೆ. ಅವುಗಳ ಪೈಕಿ ಗೃಹಭಂಗವೂ ಒಂದು. ಇದು ಭಾರತದ 13 ಭಾಷೆಗಳಿಗೂ ತರ್ಜುಮೆಗೊಂಡಿದೆ. ಬೇಜವಾಬ್ದಾರಿಯಿಂದ ಮನೆತನವೊಂದು ಹೇಗೆ ಅಧಃಪತನ ಹೊಂದುತ್ತದೆ, ಮಹಿಳೆಯೊಬ್ಬಳು ಮಕ್ಕಳ ಬೆಳವಣಿಗೆಗೆ ಪಡುವ ಕಷ್ಟ ಗಳನ್ನು ಈ ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ.

ಶ್ರೀ ರಾಮಾಯಣ ದರ್ಶನಂ
ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿ ಕೊಟ್ಟ ಕೃತಿ ಇದು. ಬಹುಶಃ ರಾಮಾ ಯಣವನ್ನು ಒಂದು ಹೊಸ ದೃಷ್ಟಿಕೋನ ದಿಂದ ಅಧ್ಯಯನ ಮಾಡಲು ಇದು ಸಹಕಾರಿಯಾಗಲಿದೆ. ರಾಮಾಯಣ ಕಥೆಯ ಜತೆಗೆ ಒಂದಷ್ಟು ಲೋಕಜ್ಞಾನವನ್ನು ಈ ಪುಸ್ತಕ ತಿಳಿಹೇಳುತ್ತದೆ. ತ್ಯಾಗ, ಸಹನೆ ಕಡಿಮೆಯಾಗುತ್ತಿರುವ ಇಂದಿನ ಸಮುದಾಯಕ್ಕೆ ಅದನ್ನು ಹೇಗೆ ಬೆಳೆಸಬಹುದು ಎಂಬುದನ್ನು ತಿಳಿಸಿಕೊಡುವಲ್ಲಿ ಈ ಕೃತಿ ಯಶಸ್ವಿಯಾಗುತ್ತದೆ.

ಅಗ್ನಿಯ ರೆಕ್ಕೆಗಳು
ಮಾಜಿ ರಾಷ್ಟ್ರಪತಿ ಡಾ|ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಆತ್ಮಕಥೆ Wings of fire ನ ಅನುವಾದ ಅಗ್ನಿಯ ರೆಕ್ಕೆಗಳು. ಜಯಪ್ರಕಾಶ್‌ ಪುತ್ತೂರು ಇದರ ಅನುವಾದಕರು. ಕಲಾಂ ತಮ್ಮ ಬಾಲ್ಯ, ತಾವು ಪಟ್ಟ ಕಷ್ಟ, ವಿದ್ಯಾರ್ಥಿ ಜೀವನ, ಕ್ಷಿಪಣಿ ಉಡ್ಡಯನದ ವಿಜ್ಞಾನಿಯಾಗಿ ಯಶಸ್ವಿಯಾದ ಬಗೆಯನ್ನು ಇಲ್ಲಿ ವಿವರಿಸಿದ್ದಾರೆ. ಸುಮಾರು 13 ಭಾಷೆಗಳಲ್ಲಿ ಈ ಪುಸ್ತಕ ಪ್ರಕಟಗೊಂಡಿದೆ. ರಾಮೇಶ್ವರ ಬೀದಿಗಳಲ್ಲಿ ಪೇಪರ್‌ ಹಂಚುತ್ತಿದ್ದ ಬಾಲಕ ವಿಜ್ಞಾನಿಯಾಗಿ ಬೆಳೆದ ರೀತಿ ವಿದ್ಯಾರ್ಥಿಗಳ ಸಾಧನೆಯ ಹಾದಿಗೆ ಸ್ಫೂರ್ತಿಯಾಗಬಲ್ಲದು.

Advertisement

ಪರಿಸರದ ಕತೆ
ಪರಿಸರದ ಕುರಿತಾದ ಬರಹಗಳಿಗೆ ಪ್ರಸಿದ್ಧರಾದ ಖ್ಯಾತ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಪರಿಸರದ ಕತೆ. ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಕಾಣುವ ಅನೇಕ ಕೌತುಕಗಳನ್ನು ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿರುವುದು ಈ ಕೃತಿಯ ವಿಶೇಷತೆ.

- ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next