Advertisement

ಇವರು ಕ್ರಿಕೆಟ್ ಜಗತ್ತಿನಲ್ಲಿ ಒಂದೂ ಸಿಕ್ಸರ್ ಹೊಡೆಯದ ಬ್ಯಾಟ್ಸಮನ್ ಗಳು

03:50 PM Sep 08, 2018 | Team Udayavani |

ಕ್ರಿಕೆಟ್ ನಲ್ಲಿ ಸಿಕ್ಸ್ ಹೊಡೆಯುವುದು ಕೂಡಾ ಒಂದು ಕಲೆ. ಆಧುನಿಕ ಕಿಕೆಟ್ ನಲ್ಲಿ ಬ್ಯಾಟ್ಸಮನ್ ಗಳು ತಾ ಮುಂದು ನಾ ಮುಂದು ಎಂಬಂತೆ ಸಿಕ್ಸ್ ಬಾರಿಸುವುದನ್ನು ನಾವು ಕಂಡಿದ್ದೇವೆ. ಟಿ20 ಕ್ರಿಕೆಟ್ ನಂತೆ ಏಕದಿನ ಕ್ರಿಕೆಟ್ ನಲ್ಲಿ ಕೂಡಾ ಸಿಕ್ಸರ್ ಗಳ ಸುರಿಮಳೆಯಾಗುತ್ತಿದೆ. 

Advertisement

ಏಕದಿನ ಕ್ರಿಕೆಟ್ ನಲ್ಲಿ ಒಂದೂ ಸಿಕ್ಸ್ ಹೊಡೆಯದ ಬ್ಯಾಟ್ಸ್ ಮನ್ ಇದ್ದಾರೆ ಎಂದರೆ ನಂಬುತ್ತೀರಾ.! ಹೌದು ಬೌಲರ್ ಗಳು ಕೂಡಾ ಮೈದಾನದ ಮೂಲೆ ಮೂಲೆಗೆ ಸಿಕ್ಸ್ ಬಾರಿಸುವ ಈ ಕಾಲದಲ್ಲಿ ಹಲವಾರು ವರ್ಷ ಏಕದಿನ ಪಂದ್ಯಗಳನ್ನಾಡಿದರೂ ಚೆಂಡನ್ನು ಸಿಕ್ಸರ್ ಗೆರೆ ದಾಟಿಸಲು ವಿಫಲರಾದ ಬ್ಯಾಟ್ಸ್ ಮನ್ ಗಳು ಇದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಈ ಪಟ್ಟಿಯಲ್ಲಿ ಭಾರತಿಯರೂ ಕೂಡಾ ಇದ್ದಾರೆ. !

1. ಕಾಲಮ್ ಫರ್ಗ್ಯುಸನ್ (ಆಸ್ಟ್ರೇಲಿಯಾ)


ಆಸ್ಟ್ರೇಲಿಯನ್ನರು ಸಿಕ್ಸರ್ ಬಾರಿಸುವುದರಲ್ಲಿ ಎತ್ತಿದ ಕೈ. ಆದರೆ  ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಆಟಗಾರ ಕಾಲಮ್  ಫರ್ಗ್ಯುಸನ ಈ ಪಟ್ಟಿಯಲ್ಲಿರುವ ಏಕೈಕ ಆಸೀಸ್ ಆಟಗಾರ.  2009 ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾದ ಕಾಲಮ್ 30 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. 5 ಅರ್ಧಶತಕ ಒಳಗೊಂಡ 662 ರನ್ ಗಳಿಸಿರುವ ಕಾಂಗರೂ ನಾಡಿನ ಆಟಗಾರ ಸಿಕ್ಸರ್ ಹೊಡೆಯಲು ಮಾತ್ರ ವಿಫಲರಾಗಿದ್ದಾರೆ. 

2. ತಿಲಾನ್ ಸಮರವೀರ ( ಶ್ರೀಲಂಕಾ)


ದ್ವೀಪ ರಾಷ್ಟ್ರ ಶ್ರೀಲಂಕಾದ ಈ ಆಟಗಾರ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ದಿಗ್ಗಜ ಆಟಗಾರರಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಜೊತೆ ಟೆಸ್ಟ್ ಕ್ರಿಕೆಟ್ ಜೊತೆಯಾಟವಾಡುತ್ತಿದ್ದ ಸಮರವೀರ 81 ಟೆಸ್ಟ್ ಪಂದ್ಯಗಳಿಂದ 5000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಆದರೆ ಏಕದಿನ ಕ್ರಿಕೆಟ್ ನಲ್ಲಿ ಸಮರವೀರ ಸಾಧನೆ ಅಷ್ಟಕ್ಕಷ್ಟೆ. ತನ್ನ 12 ವರ್ಷಗಳ ಕ್ರಿಕೆಟ್ ಜೀವನದಲ್ಲಿ 53 ಏಕದಿನ ಪಂದ್ಯಗಳನ್ನಾಡಿ 862 ರನ್ ಗಳಿಸಿದ್ದಾರೆ. ಆದರೆ ಒಂದೇ ಒಂದು ಸಿಕ್ಸ್ ಬಾರಿಸಲೂ ಸಾಧ್ಯವಾಗಿಲ್ಲ. 

Advertisement

3. ಜೆಫ್ರೀ ಬಾಯ್ಕಾಟ್ ( ಇಂಗ್ಲೆಂಡ್)


ಇಂಗ್ಲೆಂಡ್ ನ ಮಾಜಿ ಕ್ರಿಕೆಟರ್ ಜೆಫ್ರೀ ಬಾಯ್ಕಾಟ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನ ದಿಗ್ಗಜ ಎಂದು ಕರೆಯಲ್ಪಡುವ ಬಾಯ್ಕಾಟ್ 36 ಏಕದಿನ ಪಂದ್ಯಗಳನ್ನಾಡಿದ್ದಾರೆ. ಒಂದು ಶತಕ ಸೇರಿದಂತೆ 9 ಅರ್ಧ ಶತಕಗಳನ್ನು ದಾಖಲಿಸಿದ್ದರೂ ಏಕದಿನ ಕ್ರಿಕೆಟ್ ನಲ್ಲಿ ಸಿಕ್ಸರ್ ಮಾತ್ರ ಇವರಿಗೆ ಮರೀಚಿಕೆಯಾಗಿಯೇ ಉಳಿದಿದೆ.

4. ಡಾಯಿನ್ ಇಬ್ರಾಹಿಂ ( ಜಿಂಬಾಬ್ವೆ )


ಜಿಂಬಾಬ್ವೆ ತಂಡದ ಮಾಜಿ ಆಟಗಾರ ಡಾಯಿನ್ ಇಬ್ರಾಹಿಂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತೋರ್ವ ಬ್ಯಾಟ್ಸ್ ಮನ್. 2001ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಈ ಆಟಗಾರ ಜಿಂಬಾಬ್ವೆ ಟೆಸ್ಟ್ ಮತ್ತು ಏಕದಿನ ತಂಡದ ಭಾಗವಾಗಿದ್ದರು.
82 ಏಕದಿನ ಪಂದ್ಯಗಳಿಂದ 1442 ರನ್ ಗಳಿಸಿರುವ ಇಬ್ರಾಹಿಂ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕ ದಾಖಲಿಸಿದ್ದಾರೆ. ಬಾಂಗ್ಲಾದೇಶದೆದುರು ಬಾರಿಸಿದ 121 ರನ್ ಇವರ ಅತ್ಯಧಿಕ ರನ್. ಇವರು ತಮ್ಮ ಕ್ರಿಕಟ್ ಬಾಳ್ವೆಯನ್ನು ಒಂದೂ ಸಿಕ್ಸ್ ಬಾರಿಸದೆ ಕಳೆದಿದ್ದಾರೆ. ಯಾಕೆಂದರೆ ಇಬ್ರಾಹಿಂ ಟೆಸ್ಟ್ ಕ್ರಿಕೆಟ್ ನಲ್ಲಿ ಕೂಡಾ ಸಿಕ್ಸರ್ ಬಾರಿಸಲು ಸಫಲರಾಗಿಲ್ಲ. 

5. ಮನೋಜ್ ಪ್ರಭಾಕರ್ (ಭಾರತ)


ಒಂದೂ ಸಿಕ್ಸ್ ಹೊಡೆಯದವರ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಮನೋಜ್ ಪ್ರಭಾಕರ್.1984ರಿಂದ 1996 ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಈ ಆಲ್ ರೌಂಡರ್ ಕೂಡಾ ಸಿಕ್ಸ್ ಹೊಡೆಯಲು ವಿಫಲರಾಗಿದ್ದರು.

ವೇಗದ ಬೌಲರ್ ಆಗಿದ್ದ ಮನೋಜ್ ಪ್ರಭಾಕರ್ ಬ್ಯಾಟಿಂಗ್ ಕೂಡಾ ಉತ್ತಮವಾಗಿಯೇ ಇತ್ತು. ಹಲವಾರು ಇನ್ನಿಂಗ್ಸ್ ಗಳಲ್ಲಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದಿದ್ದ ಮನೋಜ್ 98 ಏಕದಿನ ಇನ್ನಿಂಗ್ಸ್ ಗಳಿಂದ 1858 ರನ್ ಗಳಿಸಿದ್ದರು. ಇದು 11 ಅರ್ಧ ಶತಕ ಮತ್ತು 2 ಶತಕಗಳನ್ನು ಒಳಗೊಂಡಿತ್ತು. 

1987,1992, 1996ರ ಏಕದಿನ ವಿಶ್ವಕಪ್ ಗಳಲ್ಲಿ ಭಾರತ ತಂಡದ ಭಾಗವಾಗಿದ್ದ ಮನೋಜ್ ಪ್ರಭಾಕರ್‌ಗೆ ಚೆಂಡನ್ನು ಮೈದಾನದ ಅಂಚಿನ ಸಿಕ್ಸರ್ ಗೆರೆ ದಾಟಿಸಲು ಮಾತ್ರ ಸಾಧ್ಯವಾಗಲೇ ಇಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next