Advertisement

5.47 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣಕ್ಕೆ ಹೊಸ ರೂಪ

01:02 PM Apr 23, 2022 | Team Udayavani |

ಕಾರವಾರ: ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯದ ಜೊತೆಗೆ, ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಲಾದೇವಿ ಕ್ರೀಡಾಂಗಣವನ್ನು 5.47 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ನಗರದ ಮಾಲಾದೇವಿ ಕ್ರೀಡಾಂಗಣದ ವೇದಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ಕಾರವಾರ ಜನರ ಬಹುದಿನಗಳ ಬೇಡಿಕೆಯಾದ ಮಾಲಾದೇವಿ ಕ್ರೀಡಾಂಗಣದ ಅಭಿವೃದ್ಧಿಗಾಗಿ ಶಾಸಕಿ ರೂಪಾಲಿ ನಾಯ್ಕ ಅವರು 5 ಕೋಟಿ ಅನುದಾನ ಸರ್ಕಾರದಿಂದ ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಬಳಿ ಹಠ ಹಿಡಿದು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವಲ್ಲಿ ಅವರು ಮುಂದಿದ್ದಾರೆ. ಅಲ್ಲದೇ ಶಾಸಕರ ಅನುದಾನದಲ್ಲಿ 47 ಲಕ್ಷ ರೂ.ಮೈದಾನದ ಆವರಣ ಗೋಡೆಗೆ ನೀಡಿದ್ದಾರೆ. ಸಕಲ ಸೌಕರ್ಯದ ಕ್ರೀಡಾಂಗಣ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ವರ್ಷದೊಳಗೆ ಈ ಕಾಮಗಾರಿ ಉದ್ಘಾಟನೆಗೆ ನಾನೇ ಆಗಮಿಸುವಂತೆ ಕೆಲಸ ಮಾಡಿ ಎಂದರು.

ಸೈಕಲ್‌ ಯಾತ್ರೆ ಮಾಡಿದ ವಿದ್ಯಾರ್ಥಿನಿಯರಿಗೆ 2 ಲಕ್ಷ ಬಹುಮಾನ ಘೋಷಣೆ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿನ ಜಿಲ್ಲೆಯ ಪರಿಶಿಷ್ಟ ವರ್ಗದ 6 ಜನ ವಿದ್ಯಾರ್ಥಿನಿಯರು ಹಿಮಾಲಯ ಶಿಖರಿ ಏರಿದ್ದು ಅಲ್ಲದೆ, ಕಾಶ್ಮೀರದಿಂದ ಕಾರವಾರದ ತನಕ ಸೈಕಲ್‌ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಅಲ್ಲದೆ ಕಾರವಾರದಿಂದ ಉಡುಪಿ ಜಿಲ್ಲೆಯ ಮಲ್ಪೆ ತನಕ ಕಯಾಕಿಂಗ್‌ ಮಾಡಿ ಸಾಧನೆ ಮಾಡಿದ ವಿಷಯ ತಿಳಿದು ಅಚ್ಚರಿಯಾಯಿತು. ಈ ಸಾಧನೆಗಾಗಿ ಇಲಾಖೆಯಿಂದ ಪ್ರತಿ ವಿದ್ಯಾರ್ಥಿನಿಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಸಚಿವ ಪೂಜಾರಿ ಘೋಷಿಸಿದರು. ಈ ಬಹುಮಾನವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಕೊಡಿಸುವ ಕಾರ್ಯಕ್ರಮ ಶೀಘ್ರದಲ್ಲಿ ಮಾಡುವೆ ಎಂದರು.

ಸರಿಯಾದ ಯೋಚನೆ, ಯೋಜನೆ, ಅನುಷ್ಠಾನ ಕಾರ್ಯ ಕೈಗೊಂಡಲ್ಲಿ ಸಾಧನೆ ಸಾಧ್ಯವಾಗುತ್ತದೆ. ಉತ್ತರ ಕನ್ನಡದ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಜಿಲ್ಲೆಗೆ ಹೆಸರು ತರುವಂತಹ ಕೆಲಸ ಮಾಡಬೇಕೆಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತರುವುದು ಬಹಳ ಶ್ರಮದ ಕೆಲಸವಾಗಿದ್ದು, ವಿವಿಧ ಕಾಮಗಾರಿಗಳಿಗೆ 19 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸಂತೋಷದ ಸಂಗತಿ. ಕ್ರೀಡಾಪಟುಗಳು ಸಂತಸಪಡುವ ದಿನವಾಗಿದೆ. ಕ್ರೀಡಾಂಗಣದ ಸದುಪಯೋಗ ಪಡೆದುಕೊಂಡು ಒಳ್ಳೆಯ ಕ್ರೀಡಾಪಟುಗಳ ಬರುವಂತಾಗಲಿ ಎಂದು ಹಾರೈಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ನಗರದ ಸರ್ಕ್ಯೂಟ್ ಹೌಸ್‌ ಕಟ್ಟಡ ನಿರ್ಮಾಣಕ್ಕಾಗಿ 9 ಕೋಟಿ 80ಲಕ್ಷ, ಲೋಕೋಪಯೋಗಿ ಇಲಾಖೆ ಕಚೇರಿ ಕಟ್ಟಡಗಳ ಸಂಕೀರ್ಣ ನಿರ್ಮಾಣಕ್ಕಾಗಿ 4 ಕೋಟಿ, ಕಾರವಾರದ ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿಗಾಗಿ 5 ಕೋಟಿ ಅನುದಾನ ಬಿಡುಗಡೆಯಾಗಿದೆ.

ಶಾಸಕರ ಅನುದಾನದಿಂದ ಕ್ರೀಡಾಂಗಣದ ಕಂಪೌಂಡ್‌ ನಿರ್ಮಾಣಕ್ಕಾಗಿ 47 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು. ದೇವಿಯ ಆಶೀರ್ವಾದದಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಯವುದೇ ವಿಘ್ನಗಳು ಬರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಮ್‌ಎಲ್‌ಸಿ ಗಣಪತಿ ಉಳ್ವೇಕರ್‌, ನಗರಸಭಾ ಅಧ್ಯಕ್ಷ ಡಾ| ನಿತಿನ್‌ ಎಸ್‌. ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಶಶಿಕಾಂತ ಕೊಳೆಕರ್‌ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next