Advertisement

4ನೇ ಬಾರಿ ಮಂತ್ರಿಯಾದ ಡಿಕೆಶಿ

03:54 PM Jun 07, 2018 | |

ರಾಮನಗರ: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಪ್ರಭಾವಿ ಕಾಂಗ್ರೆಸ್‌ ಮುಖಂಡ ಹಾಗೂ ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್‌ ಬುಧವಾರ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಸಾತನೂರು ವಿಧಾನಸಭಾ ಕ್ಷೇತ್ರದಿಂದ 4 ಮತ್ತು ಕನಕಪುರ ಕ್ಷೇತ್ರದಿಂದ ಮೂರನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. ಇದೀಗ 4ನೇ ಬಾರಿಗೆ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಇಂಧನ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಡಿ.ಕೆ.ಶಿವಕುಮಾರ್‌, ಎಸ್‌. ಬಂಗಾರಪ್ಪ , ಎಸ್‌.ಎಂ.ಕೃಷ್ಣ ಅವರ ಸಂಪುಟದಲ್ಲಿಯೂ ಸಚಿವರಾಗಿ ಬಂಧಿಖಾನೆ, ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು. ಡಿ.ಕೆ.ಶಿ ಅವರಿಗೆ ಈ ಬಾರಿಯೂ ಇಂಧನ ಖಾತೆ ಸಿಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್‌ ಕಾರ್ಯಕರ್ತರಲ್ಲಿದೆ.

 ಡಿ.ಕೆ.ಶಿವಕುಮಾರ್‌ ಕಿರು ಪರಿಚಯ : ಕನಕಪುರ ತಾಲೂಕು ದೊಡ್ಡಾಲಹಳ್ಳಿಯ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಗಳ ಮೊದಲ ಪುತ್ರ ಡಿ.ಕೆ. ಶಿವಕುಮಾರ್‌. ಜನಿಸಿದ್ದು ಮೇ. 15, 1961ರಲ್ಲಿ. ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಜ್ಯ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಪತ್ನಿ ಉಷಾ, ಮಕ್ಕಳಾದ ಐಶ್ವರ್ಯ, ಆಭರಣ ಮತ್ತು ಆಕಾಶ್‌ರೊಂದಿಗೆ ಕನಕಪುರದಲ್ಲೇ ವಾಸ.

ರಾಜಕೀಯಕ್ಕೆ ಪ್ರವೇಶ: ವ್ಯವಸಾಯ ಸಹಕಾರ ಸಂಘದ ಮೂಲಕ ರಾಜಕೀಯ ಪ್ರವೇಶಿಸಿದ ಡಿ.ಕೆ.ಶಿ 1985ರಲ್ಲಿ ಮೊದಲ ಬಾರಿಗೆ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 1987ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾದರು.

1989ರಲ್ಲಿ ಮತ್ತು ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
ಸಚಿವರಾಗಿ ಬಂಧಿಖಾನೆ ಖಾತೆಯನ್ನು ನಿರ್ವಹಿಸಿದ್ದರು. 1994ರಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1999ರಲ್ಲಿ ಎಚ್‌ .ಡಿ.ಕುಮಾರಸ್ವಾಮಿ ಅವರ ವಿರುದ್ಧವೂ ಗೆಲವು ಸಾಧಿಸಿದ್ದರು. 2004ರಲ್ಲಿ ಜೆಡಿಎಸ್‌ ಅಭ್ಯರ್ಥಿ ಡಿ.ಎಂ. ವಿಶ್ವನಾಥ್‌ ವಿರುದ್ದ ಗೆದಿದ್ದರು.

Advertisement

ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗಿದ್ದರಿಂದ ಸಾತನೂರು ಕ್ಷೇತ್ರ ಅಳಿಸಿ ಹೋಯಿತು. ತದನಂತರ ಅವರು ಕನಕಪುರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. 2008ರಲ್ಲಿ ಮತ್ತೆ ಜೆಡಿಎಸ್‌ ಅಭ್ಯರ್ಥಿ ಡಿ.ಎಂ.ವಿಶ್ವನಾಥ್‌ ವಿರುದ್ಧ, 2013ರಲ್ಲಿ ಪಿ.ಜಿ.ಆರ್‌ ಸಿಂಧ್ಯಾ ವಿರುದ್ಧ ಸ್ಪರ್ಧಿಸಿ ಗೆದ್ದರು. ಇದೀಗ ಮೇ 12, 2018ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಾರಾಯಣ ಗೌಡರ ವಿರುದ್ಧ 79909 ಮತಗಳ ಅಂತರದಿಂದ ಗೆದ್ದಿದ್ದಾರೆ.

 ಕಾಂಗ್ರೆಸ್‌ ಪಕ್ಷದಲ್ಲಿ ಸೇವೆ : 2001ರಲ್ಲಿ ಎಐಸಿಸಿಯ ಸದಸ್ಯರಾಗಿದ್ದ ಡಿ.ಕೆ.ಶಿವಕುಮಾರ್‌ 1985 ರಿಂದ 2001ರವರೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರು. 2013ರ ಚುನಾವಣೆಯಲ್ಲಿ ಚುನಾವಣಾ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿದ್ದರು. 2018ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಕನಕಪುರದಲ್ಲಿ ಅಭಿವೃದ್ಧಿ ಪರ್ವ ನಿರಂತರ
ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಿ.ಕೆ. ಶಿವಕುಮಾರ್‌, ಇಂಧನ ಕ್ಷೇತ್ರದಲ್ಲಿ ಬದಲಾವಣೆಗೆ ಕಾರಣರಾಗಿದ್ದಾರೆ ಎಂಬುದು ಸಾಮಾನ್ಯ ನಾಗರಿಕರ ಅಭಿಪ್ರಾಯ. ತಲಾ ಇಬ್ಬರು ರೈತರಿಗೆ ಎಚ್‌.ವಿ.ಡಿ.ಎಸ್‌. ಯೋಜನೆಯಡಿಯಲ್ಲಿ ಉಚಿತ ಟ್ರಾನ್ಸ್‌ ಫಾರ್ಮರ್‌ ನೀಡಿರುವುದು ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

ಸೂರ್ಯ ರೈತ ಯೋಜನೆ, ಸೋಲಾರ್‌ ಮೂಲಕ ವಿದ್ಯುತ್‌ ಉತ್ಪಾದನೆಗಳ ಬಗ್ಗೆ ಜನಮೆಚ್ಚುಗೆ ಇದೆ. ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಇರುವ ಕನಕಪುರದಲ್ಲಿ ಡಿ.ಕೆ.ಶಿ ತಾಲೂಕು ಕಚೇರಿಗೆ ನೂತನ ಕಟ್ಟಡ, ಅಂಬೇಡ್ಕರ್‌ ಭವನ, ನೂತನ ಬಸ್‌ ನಿಲ್ದಾಣ, ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ವೃದ್ಧಿಗೆ ಕಾರಣರಾಗಿದ್ಧಾರೆ.

ಮಿನಿವಿಧಾನಸೌಧ, .ಕೆ.ಎಂ.ಎಫ್ ಮೆಗಾಡೇರಿ, ಅಂಬೇಡ್ಕರ್‌ ಭವನ ಸೇರಿದಂತೆ ನೂತನ ಸರ್ಕಾರಿ ಕಟ್ಟಡಗಳು, ರಸ್ತೆ, ಇಲಾಖೆಗಳ ಕಟ್ಟಡ, ಶಾಲಾ-ಕಾಲೇಜುಗಳ ಕಟ್ಟಡ, ಅಭಿವೃದ್ಧಿಯಲ್ಲಿ ಊಹಿಸಲಾಗದ ಸಾಧನೆ ಮಾಡಿರುವ
ಶಿವಕುಮಾರ್‌, ಇದೀಗ 4ನೇ ಬಾರಿ ಸಚಿವರಾಗಿರುವುದು ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next