Advertisement

4ನೇ ಟಿ20; ಸೋಲಿನ ಭೀತಿಯಲ್ಲಿ ಜಿಂಬಾಬ್ವೆ ಸರಣಿ ಗೆಲುವಿಗೆ ಕಿರಿಯರು ಸಜ್ಜು

12:08 AM Jul 13, 2024 | Team Udayavani |

ಹರಾರೆ: ಸರಣಿ ಸಮ ಬಲಗೊಂಡಿತು, ಸರಣಿ ಮುನ್ನ ಡೆಯೂ ಸಿಕ್ಕಿತು, ಇನ್ನು ಯಂಗ್‌ ಇಂಡಿಯಾ ಮುಂದಿರುವುದು ಸರಣಿ ಗೆಲುವಿನ ಸರದಿ.ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಆಘಾತಕ್ಕೆ ಸಿಲುಕಿದ ಬಳಿಕ ಸರ್ವಾಂಗೀಣ ಪ್ರದರ್ಶನ ನೀಡುತ್ತ ಬಂದಿರುವ ಭಾರತ ತಂಡವೀಗ ಆತಿಥೇಯ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ವಶಪಡಿಸಿಕೊಳ್ಳಲು ಸಜ್ಜುಗೊಂಡು ನಿಂತಿದೆ.

Advertisement

ಶನಿವಾರ ಹರಾರೆ ಅಂಗಳ ದಲ್ಲೇ 4ನೇ ಮುಖಾ ಮುಖಿ ಏರ್ಪಡಲಿದ್ದು, ಇದನ್ನು ಗೆದ್ದರೆ ಸರಣಿ ಗಿಲ್‌ ಬಳಗದ ಪಾಲಾಗಲಿದೆ. ಇದು ಟಿ20 ವಿಶ್ವಕಪ್‌ ಗೆದ್ದ “ಸೀನಿಯರ್ ತಂಡ’ಕ್ಕೆ ಕಿರಿಯರು ಸಲ್ಲಿಸಲಿರುವ ಉತ್ತಮ ಉಡುಗೊರೆ ಎಂದು ಪರಿಗಣಿಸಬಹುದು.

ಇನ್ನೊಂದೆಡೆ ಜಿಂಬಾಬ್ವೆ ಈ ಸರಣಿಯನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಬೇಕಿದೆ. ಮೊದಲ ಪಂದ್ಯದ ಜೋಶ್‌ ಅನಂತರ ಕಂಡುಬಂದಿಲ್ಲ. 3ನೇ ಪಂದ್ಯದಲ್ಲಿ ಒಂದಿಷ್ಟು ಹೋರಾಟ ನೀಡಿತಾದರೂ ಫಿನಿಶಿಂಗ್‌ನಲ್ಲಿ ಎಡವಿತು. ಶನಿವಾರ ಸುಧಾರಿತ ಪ್ರದರ್ಶನ ನೀಡೀತೇ? ಭಾರತದ ಓಟಕ್ಕೆ ಬ್ರೇಕ್‌ ಹಾಕೀತೇ? ನಿರೀಕ್ಷೆಗೇನೂ ಬರವಿಲ್ಲ.

ಮಹತ್ವದ ಪಂದ್ಯಗಳು
ಭಾರತದ ಪಾಲಿಗೆ ಉಳಿದೆ ರಡೂ ಪಂದ್ಯಗಳು ಅನೇಕ ಕಾರಣ ಗಳಿಗಾಗಿ ಮಹತ್ವದ್ದಾಗಿವೆ. ಮೊದಲ ನೆಯದಾಗಿ, ಮುಂಬರುವ ಲಂಕಾ ವಿರುದ್ಧದ ಸರಣಿಗಾಗಿ ತಂಡ ವನ್ನು ಪ್ರಕಟಿಸಬೇಕು. ಹಾಗೆಯೇ, ನಿವೃತ್ತರಾದ ರೋಹಿತ್‌, ಕೊಹ್ಲಿ, ಜಡೇಜ ಸ್ಥಾನಕ್ಕೆ ಸಮರ್ಥ ಬದಲಿ ಆಟಗಾರರನ್ನು ಆರಿಸಿ ಮುಂದಿನ ಟಿ20 ವಿಶ್ವಕಪ್‌ ಒಳಗಾಗಿ ಬಲಿಷ್ಠ ತಂಡವೊಂದನ್ನು ಕಟ್ಟಬೇಕು.

ಶ್ರೀಲಂಕಾ ಪ್ರವಾಸ ವೇಳೆ ಭಾರತ 3 ಟಿ20 ಪಂದ್ಯಗಳನ್ನು ಆಡಲಿದೆ. ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದರೂ ಶುಭಮನ್‌ ಗಿಲ್‌ ನಾಯಕರಾಗಿ ಮುಂದುವರಿಯು ವುದಿಲ್ಲ ಎಂಬುದು ಸ್ಪಷ್ಟ. ಈ ಸ್ಥಾನ ಹಾರ್ದಿಕ್‌ ಪಾಂಡ್ಯ ಪಾಲಾಗುವುದು ಬಹು ತೇಕ ಖಚಿತ. ಹಾಗೆಯೇ ವಿಶ್ವ ಕಪ್‌ನಿಂದ ಹೊರಗುಳಿದಿದ್ದ ಕೆ.ಎಲ್‌. ರಾಹುಲ್‌ ತಂಡಕ್ಕೆ ಮರಳುವ ಎಲ್ಲ ಸಾಧ್ಯತೆ ಇದೆ. ಜತೆಗೆ ವಿಶ್ವಕಪ್‌ ವಿಜೇತ ತಂಡದ ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜು ವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಅವರಲ್ಲಿ ಕೆಲವರಾದರೂ ಲಂಕಾ ಪ್ರವಾಸಕ್ಕೆ ಮರಳಲಿದ್ದಾರೆ.

Advertisement

ಜಿಂಬಾಬ್ವೆ ಪ್ರವಾಸದಲ್ಲಿರುವ ಈಗಿನ ತಂಡದ ಕೆಲವು ಸಾಧಕರನ್ನು ಉಳಿಸಿಕೊಂಡು ಸಮತೋಲಿತ ತಂಡವನ್ನು ಕಟ್ಟಬೇಕಾಗುತ್ತದೆ. ಈ ಸರಣಿಯಲ್ಲಿ ಮಿಂಚಿದವರೆಂದರೆ ಶುಭಮನ್‌ ಗಿಲ್‌, ಅಭಿಷೇಕ್‌ ಶರ್ಮ, ಯಶಸ್ವಿ ಜೈಸ್ವಾಲ್‌, ಋತು ರಾಜ್‌ ಗಾಯಕ್ವಾಡ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ ಮೊದಲಾದವರು. ಉಳಿದೆರಡು ಪಂದ್ಯಗಳಲ್ಲಿ ಇನ್ನೂ ಕೆಲವರು ಮಿಂಚಬಹುದು.

ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಕೊನೆಯ 2 ಪಂದ್ಯ ಗಳಲ್ಲಿ ನಮ್ಮವರ ಸಾಧನೆಯನ್ನು ಸೂಕ್ಷ್ಮವಾಗಿ ಗಮನಿಸಲಿದೆ.

ತಂಡ ಹೆಚ್ಚು ಬಲಿಷ್ಠ
ಜೈಸ್ವಾಲ್‌, ಸ್ಯಾಮ್ಸನ್‌, ದುಬೆ ಆಗಮನದಿಂದ ಭಾರತ ತಂಡ ಹೆಚ್ಚು ಬಲಿಷ್ಠಗೊಂಡಿದೆ. ಮೂವರೂ 3ನೇ ಪಂದ್ಯದ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಜೈಸ್ವಾಲ್‌ ಎಂದಿನಂತೆ ಜಬರ್ದಸ್ತ್ ಬ್ಯಾಟಿಂಗ್‌ ನಡೆಸಿದ್ದರು. ಸ್ಯಾಮ್ಸನ್‌ಗೆ ಏಳೇ ಎಸೆತ ಎದುರಿಸುವ ಅವಕಾಶ ಸಿಕ್ಕಿತ್ತು. 2 ಬೌಂಡರಿ ಬಾರಿಸಿ ಅಜೇಯ 12 ರನ್‌ ಮಾಡಿದ್ದರು. ದುಬೆಗೆ ಬ್ಯಾಟಿಂಗ್‌ ಲಭಿಸಿರಲಿಲ್ಲ. 2 ಓವರ್‌ಗಳಲ್ಲಿ 27 ರನ್‌ ಕೊಟ್ಟು ದುಬಾರಿಯಾಗಿದ್ದರು. ಆದರೂ ದುಬೆಗೆ ಇನ್ನೊಂದು ಚಾನ್ಸ್‌ ಸಿಗುವುದು ಪಕ್ಕಾ. ಹಾಗೆಯೇ ರಿಯಾನ್‌ ಪರಾಗ್‌, ಮುಕೇಶ್‌ ಕುಮಾರ್‌, ತುಷಾರ್‌ ದೇಶಪಾಂಡೆ ರೇಸ್‌ನಲ್ಲಿ ಇದ್ದಾರೆಂಬುದನ್ನೂ ಮರೆಯುವಂತಿಲ್ಲ.

ಅನನುಭವಿ ಜಿಂಬಾಬ್ವೆ
ಜಿಂಬಾಬ್ವೆ ಅನುಭವ ಹಾಗೂ ಪರಿಣತಿ ಹೊಂದಿಲ್ಲದ ಕಾರಣ ಎಡ ವುತ್ತಿದೆ. ಬೌಲಿಂಗ್‌ನಲ್ಲಿ ಬ್ಲೆಸಿಂಗ್‌ ಮುಜರಬನಿ, ಬ್ಯಾಟಿಂಗ್‌ನಲ್ಲಿ ಡಿಯಾನ್‌ ಮೇಯರ್, ಕೀಪರ್‌ ಕ್ಲೈವ್‌ ಮದಾಂಡೆ ಮಾತ್ರ ಗಮನ ಸೆಳೆದಿದ್ದಾರೆ. ಸರಣಿಯನ್ನು ಸಮ ಬಲಕ್ಕೆ ತರಬೇಕಾದರೆ ತಂಡವಾಗಿ ಆಡುವುದು ಮುಖ್ಯ.

·ಆರಂಭ: ಸಂಜೆ 4.30
·ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next