ಪುತ್ತೂರು : ಗ್ರಾಮೀಣ ಅಂಚೆ ನೌಕರರ ಅಸಹಾಯಕತೆಗೆ ಕೇಂದ್ರ ಸರಕಾರ ಸ್ಪಂದಿಸುವ ಆಶಾವಾದ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿರುವುದು ಭರವಸೆ ಮೂಡಿಸಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದರು. ಪುತ್ತೂರು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದಿಂದ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಶುಕ್ರವಾರ ನಾಲ್ಕನೇ ದಿನ ಹಮ್ಮಿಕೊಳ್ಳಲಾದ ಧರಣಿ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಘದ ಮೂಲಕ ಹೋರಾಟದಿಂದಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿ ಕೊಂಡಿದ್ದೇವೆ. ಈಗಲೂ ಅನಿವಾರ್ಯವಾಗಿ ಸಂಘಟಿತ ಹೋರಾಟಕ್ಕೆ ಇಳಿದಿದ್ದೇವೆ. 7ನೇ ವೇತನ ಆಯೋಗದಂತೆ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು, ಇಲಾಖೆಯ ನೌಕರರಂತೆ ನಮ್ಮನ್ನು ಪರಿಗಣಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ಉಪವಲಯ ಕಾರ್ಯದರ್ಶಿ ಸಂತೋಷ್, ಬಂಟ್ವಾಳ ಉಪವಲಯದ ಗಣೇಶ್, ವಿಭಾಗದ ಮಾಜಿ ಕಾರ್ಯದರ್ಶಿ ಗಣೇಶ್ ರೈ, ವಿವಿಧ ವಲಯಗಳ ಪದಾಧಿಕಾರಿಗಳು ಪಾಲ್ಗೊಂಡರು.
ಮೌನ ಪ್ರಾರ್ಥನೆ
ಪುತ್ತೂರು ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತನಿಯ ಮಾನಿಲ ಅವರು ಗುರುವಾರ ರಾತ್ರಿ ಅಪಘಾತದಲ್ಲಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಸೇರಿದ ನೌಕರರು ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಸಿಬಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಅರ್ಧ ಗಂಟೆ ಅವಧಿಗೆ ಮಾತ್ರ ಧರಣಿ ನಡೆಸಿ ನೌಕರರು ತೆರಳಿದರು.
ಶುಕ್ರವಾರ 100ಕ್ಕೂ ಮಿಕ್ಕಿ ಮಂದಿ ಗ್ರಾಮೀಣ ಅಂಚೆ ನೌಕರರು ಧರಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮುಂದಿನ ಪ್ರತಿಭಟನೆಯನ್ನು ಸೋಮವಾರ ನಡೆಸುವ ಕುರಿತು ತೀರ್ಮಾನ ಕೈಗೊಂಡರು.