ಕಡಬ: ಅಡಿಕೆ ಕೊಳೆ ರೋಗದ ಬಾಧೆಯಿಂದ ತೊಂದರೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ 49,631 ರೈತರಿಗೆ 49 ಕೋಟಿ ರೂ.ಗಳಿಗೂ ಮಿಕ್ಕಿ ಪರಿಹಾರಧನ ವಿತರಿಸಲಾಗಿದ್ದು, ಕಡಬ ತಾಲೂಕಿನ ವ್ಯಾಪ್ತಿಯಲ್ಲಿಯೇ 8,429 ಮಂದಿಗೆ 7.5 ಕೋಟಿ ರೂ. ವಿತರಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರೈತರ ಸಾಲ ಮನ್ನಾ ಮಾಡಿರುವ ಸರಕಾರ ಈಗಾಗಲೇ ಋಣ ಪತ್ರವನ್ನು ನೇರವಾಗಿ ಅವರ ವಿಳಾಸಕ್ಕೆ ಕಳುಹಿಸಿದೆ. ಸಾಲ ಮನ್ನಾ ವಿಚಾರದಲ್ಲಿ ಸಹಕಾರಿ ಸಂಘಗಳು ಹಾಗೂ ಬ್ಯಾಂಕುಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎನ್ನುವ ಕಾರಣ ಸರಕಾರ ನೇರವಾಗಿ ಋಣಪತ್ರ ನೀಡುತ್ತಿದೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮ ಹಾಗೂ ಕಡಬದಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮಿನಿ ವಿಧಾನಸೌಧಕ್ಕೆ 10 ಕೋ.ರೂ.
ನೂತನ ಕಡಬ ತಾಲೂಕಿನಲ್ಲಿ ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಸೇವೆ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಸರಕಾರವು 10 ಕೋಟಿ ರೂ. ಮಂಜೂರುಗೊಳಿಸಿದ್ದು, ಈಗಾಗಲೇ 2 ಕೋಟಿ ರೂ. ಬಿಡುಗಡೆಯಾಗಿದೆ. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾಮಗಾರಿಯನ್ನು ವಹಿಸಿಕೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದ್ದು, ಒಂದು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಐವನ್ ಹೇಳಿದರು.
ಹೊಸ ತಾಲೂಕುಗಳಿಗೆ ಅಗತ್ಯ ಸಿಬಂದಿ ನೇಮಕ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಕಡಬದಲ್ಲಿ ಉಪ ನೋಂದಣಿ ಕಚೇರಿ ಹಾಗೂ ವಿವಿಧ ವಿಲಾಖೆಗಳ ತಾಲೂಕುಮಟ್ಟದ ಕಚೇರಿಗಳನ್ನು ಶೀಘ್ರ ತೆರೆಯಲಾಗುವುದು. ಅಕ್ರಮ ಸಕ್ರಮದಲ್ಲಿ ಕಡಬ ತಾಲೂಕಿನಲ್ಲಿ 13533 ಅರ್ಜಿ ಸಲ್ಲಿಕೆಯಾಗಿದೆ. 21748 ಎಕ್ರೆ ಭೂಮಿಯ ಹಕ್ಕುಪತ್ರ ವಿತರಣೆ ಮಾಡಲು ಹೋಬಳಿ ಮಟ್ಟದ ಅಕ್ರಮ ಸಕ್ರಮ ಸಮಿತಿ ರಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ರಾಡ್ರಿಗಸ್, ಜಿ.ಪಂ. ಪಿ.ಪಿ. ವರ್ಗೀಸ್, ತಾ.ಪಂ. ಸದಸ್ಯರಾದ ಗಣೇಶ್ ಕೈಕುರೆ, ಕೆ.ಟಿ. ವಲ್ಸಮ್ಮ, ಶುಭದಾ ಎಸ್. ರೈ, ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಉಪಸ್ಥಿತರಿದ್ದರು.