ಕಾರವಾರ: ಪ್ರತಿ ತಿಂಗಳ ಎರಡನೇ ಭಾನುವಾರ ಪಜಾ, ಪಂಗಡ ಜನಾಂಗಗಳ ಸಮಸ್ಯೆ, ದೂರು ಇತ್ಯರ್ಥಗಳ ಕುರಿತು ಎಲ್ಲ ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ ಎಂದು ಆಚರಿಸಲು ಕಾರ್ಯಕ್ರಮ ರೂಪಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ಸೂಚಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ನಡೆದ ಪಜಾ ಮತ್ತು ಪಂಗಡಗಳ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ದಲಿತ ಸಮುದಾಯದಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಅವರ ಸಮಸ್ಯೆ ಆಲಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಂಬಂಧ ಪೊಲೀಸ್ ಇಲಾಖೆ ಪ್ರತಿ ತಿಂಗಳ ಎರಡನೇ ಭಾನುವಾರ ದಲಿತರ ದಿನ ಎಂದು ಆಚರಿಸುವಂತೆ ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲೂ ದಲಿತರ ದಿನ ಕಾರ್ಯಕ್ರಮ ರೂಪಿಸುವಂತೆ ಅವರು ಪೊಲೀಸ್ ಇಲಾಖೆಗೆ ಸೂಚಿಸಿದರು.
ದಲಿತರ ದಿನ ಕಾರ್ಯಕ್ರಮ ಏರ್ಪಡಿಸಿ ಆ ಭಾಗದ ದಲಿತ ಮುಖಂಡರನ್ನು ಆಹ್ವಾನಿಸಬೇಕು. ಅವರ ಸಮಸ್ಯೆಗಳನ್ನು ಆಲಿಸಿ ಅಲ್ಲಿಯೇ ಇತ್ಯರ್ಥ ಪಡಿಸುವುದಾದಲ್ಲಿ ಕ್ರಮ ವಹಿಸುವುದು ಹಾಗೂ ಮೇಲಧಿಕಾರಿಗಳ ಮಟ್ಟದ್ದಾಗಿದ್ದರೆ ಠಾಣಾಧಿಕಾರಿ ಪೊಲೀಸ್ ಇಲಾಖೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನಂತರ ತಿಂಗಳ ಕೊನೆಯ ಭಾನುವಾರ ನಡೆಯುವ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವರದಿ ಕುರಿತು ಕ್ರಮಕ್ಕೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಕ್ರಮ ವಹಿಸಬೇಕಿದೆ. ಆದ್ದರಿಂದ ಕೂಡಲೆ ಪೊಲೀಸ್ ಇಲಾಖೆ ಸರ್ಕಾರದ ಆದೇಶದಂತೆ ದಲಿತರ ದಿನಾಚರಣೆಗೆ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪಜಾ ಮತ್ತು ಪಂಗಡದ ಸಮಸ್ಯೆಗಳನ್ನು ಏಕಗವಾಕ್ಷಿ ಪದ್ಧತಿಯಲ್ಲಿ ದೂರು ಸ್ವೀಕರಿಸಿ ಬಗೆಹರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಇಲಾಖೆಯಿಂದ ದೌರ್ಜನ್ಯ ತಡೆ ಕಾಯ್ದೆ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ತಿಳಿಸಿದರು.
ದೌರ್ಜನ್ಯ ನಿಯಂತ್ರಣ ಕಾಯ್ದೆ 1995 ನಿಯಮ 17ರಡಿ ಪಜಾ, ಪಂಗಡಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಸರ್ಕಾರಿ ಅಭಿಯೋಜಕರು, ಹಳಿಯಾಳ ತಾಲೂಕಿನ ದಿಯೋಗ ಸಿದ್ದಿ, ಕುಮಟಾ ತಾಲೂಕಿನ ಮಂಜುನಾಥ ಕುಮಾರ್ ಅಗೇರ, ಮುಂಡಗೋಡ ತಾಲೂಕಿನ ಎಸ್.ಫಕೀರಪ್ಪ (ಸಣ್ಣ ಫಕೀರಪ್ಪ ಹರಿಜನ), ಶಿರಸಿ ತಾಲೂಕಿನ ಗೀತಾ ರಾಮಣ್ಣಾ ಭೋವಿ, ಡಿ.ಬಂಗಾರಪ್ಪ, ಡಾ| ವೆಂಕಟೇಶ್ ನಾಯ್ಕ, ಶಿರಸಿ, ಹೊನ್ನಾವರ ತಾಲೂಕಿನ ತುಳಸೀದಾಸ ಗಣಪತಿ ಪಾವುಸ್ಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ ಉಪಸ್ಥಿತರಿದ್ದರು.