ಸಂತೆಮರಹಳ್ಳಿ: ಯಳಂದೂದು ತಾಲೂಕಿನ ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ ಎಲ್ಲೆ, ಮದ್ದೂರುಗುಡ್ಡ, ಆಮೆಕೆರೆ ರಸ್ತೆಯಲ್ಲಿರುವ ಪ್ರಸಿದ್ಧ ಶಿವಪಾರ್ವತಿ ದೇಗುಲದ ಮುಂಭಾಗ ನಿರ್ಮಿಸಿರುವ ಜಿಲ್ಲೆಯ ಅತಿ ಎತ್ತರದ ಶಿವನ ವಿಗ್ರಹದ ಪ್ರತಿಷ್ಠಾಪನೆಯ 48ನೇ ದಿನವನ್ನು ಮಂಗಳವಾರ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ಅದಕ್ಕಾಗಿ ಬೆಳಗ್ಗೆಯಿಂದಲೇ ದೇಗುಲದಲ್ಲಿ ವಿಶೇಷ ಅಭಿಷೇಕ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. 35 ಅಡಿ ಎತ್ತರದಲ್ಲಿ ಕುಳಿತಿರುವ ಭಂಗಿಯ ಈಶ್ವರನ ಕಾಂಕ್ರೀಟ್ ಪ್ರತಿಮೆಯನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಜಿಲ್ಲೆಯ ಅತ್ಯಂತ ಎತ್ತರದ ಈಶ್ವರನ ಪ್ರತಿಮೆಯಾಗಿದೆ. ಕಳೆದ 48 ದಿನಗಳ ಹಿಂದೆ ಇದನ್ನು ಲೋಕಾರ್ಪಣೆ ಮಾಡಲಾಗಿತ್ತು.
ಈಗ 48 ನೇ ದಿನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವತಾ ಕಾರ್ಯಗಳು ಮುಗಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಠಾಧ್ಯಕ್ಷರು, ರಾಜಕೀಯ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇಗುಲದ ಸಂಸ್ಥಾಪಕ ಪಿ.ರಾಮಣ್ಣ ಮಾತನಾಡಿ, 32 ವರ್ಷಗಳ ಹಿಂದೆ ಇಲ್ಲಿ ಶಿವಪಾರ್ವತಿ ದೇಗುಲವನ್ನು ನಿರ್ಮಾಣ ಮಾಡಲಾಗಿತ್ತು.
ಇದರ ಜೊತೆಗೆ ಗಣಪತಿ, ಸುಬ್ರಹ್ಮಣ್ಯ, ನವಗ್ರಹ ದೇಗುಲಗಳೂ ಇದ್ದು ಪ್ರಸಿದ್ಧಿ ಪಡೆದಿದೆ. ಸಾವಿರಾರು ಭಕ್ತರು ಈ ದೇಗುಲಕ್ಕೆ ಆಗಮಿಸುತ್ತಾರೆ. ಪ್ರತಿನಿತ್ಯ ಇಲ್ಲಿ ಪೂಜೆ ಇರುತ್ತದೆ. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇಲ್ಲಿ ವಿಶೇಷ ಪೂಜೆ ಇರುತ್ತದೆ ಎಂದರು.
ಬೆಟ್ಟದ ತಪ್ಪಲಿನಲ್ಲಿ ತಪೋಭಂಗಿಯಲ್ಲಿ ಕುಳಿತಿರುವ 35 ಅಡಿ ಎತ್ತರದ ಶಿವನ ವಿಗ್ರಹ ನಿರ್ಮಾಣ ಇಲ್ಲಿನ ಮತ್ತೂಂದು ಆಕರ್ಷಣೆಯಾಗಿದ್ದು ಮುಂದಿನ ದಿನಗಳಲ್ಲಿ ಇದೊಂದು ಪ್ರವಾಸಿ ತಾಣವಾಗಿ ಮಾರ್ಪಡುವಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಚಮರಾಜನಗರ ಹಾಗೂ ನೆರೆಯ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು.