Advertisement

ಧಾರಾಕಾರ ಮಳೆಗೆ 296 ಶಾಲೆಗಳ 483 ಕೊಠಡಿಗೆ ಹಾನಿ

02:32 PM Nov 23, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ವರ್ಷಗಳ ನಂತರ ಕೆರೆಕುಂಟೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದ್ದರೆ, ಇತ್ತ 296 ಶಾಲೆಗಳ 483 ಕೊಠಡಿಗಳಿಗೆ ಹಾನಿಯಾಗಿ, ವಿದ್ಯಾರ್ಥಿಗಳ ಕಲಿಕಿಗೆ ತೊಂದರೆಯಾಗಿದೆ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗಿದ್ದು, ಸಾರ್ವಜನಿಕ ಇಲಾಖೆ ಅಧಿಕಾರಿಗಳು ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ 1ರಿಂದ 10ನೇ ತರಗತಿಯವರೆಗೆ ಪಾಠ ಪ್ರವಚನಗಳನ್ನು ಆರಂಭಿಸಿದ್ದಾರೆ.

Advertisement

ಈ ಮಧ್ಯೆ ಜಿಲ್ಲೆಯಲ್ಲಿ ಎಂದೆಂದೂ ಕಾಣದಂತಹ ಮಳೆ ಪ್ರಭಾವದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಎರಡು ದಿನ ರಜೆ ಘೋಷಣೆ ಮಾಡಿತ್ತು. ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳು ಮಂಗಳವಾರದಿಂದ ಪುನಾರಂಭ ಆಗಲಿದ್ದು, ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ.

ಕೆಲವೊಂದು ಶಾಲೆಗಳು ಭದ್ರವಾಗಿದ್ದರೆ, ಕೆಲವು ಮಳೆಯಿಂದ ಸೋರಿಕೆ ಆಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.

ಚಾವಣಿಗೆ ಟಾರ್ಪಲ್‌ ವ್ಯವಸ್ಥೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ ಅವರು, ಈಗಾಗಲೇ ಶಿಥಿಲಾವಸ್ಥೆ, ಮಳೆಯಿಂದ ಸೋರಿಕೆ ಆಗುತ್ತಿರುವ, ಸಂಪೂರ್ಣ ಹಾನಿ ಆಗಿರುವ ಸರ್ಕಾರಿ ಶಾಲೆ, ಕೊಠಡಿಗಳ ಸಂಖ್ಯೆಯನ್ನು ಕಲೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಸೋರಿಕೆ ಆಗುತ್ತಿದ್ದು, ಆಯಾ ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ಲಾಸ್ಟಿಕ್‌ ಟಾರ್ಪಲ್‌ಗ‌ಳನ್ನು ಹಾಕಿ ಭದ್ರತೆ ಒದಗಿಸಿದ್ದಾರೆ.

ಎರಡು ಮೂರು ಕೊಠಡಿಯಲ್ಲೇ ಪಾಠ: ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೊಂದು ಸರ್ಕಾರಿ ಶಾಲೆಗಳು ಮಳೆಯ ನೀರಿನಿಂದ ತುಂಬಿ ತುಳುಕಾಡುತ್ತಿವೆ. ಇನ್ನೂ ಅನೇಕ ಶಾಲೆಗಳು ಬಿರುಕು ಬಿಟ್ಟಿವೆ, ಶಾಲೆಯಲ್ಲಿ ಬೋಧನೆ ಮಾಡುವ ಶಿಕ್ಷಕರು ಸೋರಿಕೆಯಾಗುತ್ತಿರುವ ಕೊಠಡಿಗಳಿಂದ ಮಕ್ಕಳನ್ನು ಪಾರುಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಸುಭದ್ರವಾಗಿರುವ ಕೊಠಡಿಗಳಲ್ಲಿ ಎರಡು ಮೂರು ತರಗತಿಗಳನ್ನು ವಿಲೀನ ಮಾಡಿ ಪಾಠ ಪ್ರವಚನಗಳನ್ನು ಮಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ತೆರಳಿ ಬೆಳೆ ನಷ್ಟ ಕುರಿತು ವೀಕ್ಷಣೆ ಮಾಡಿ ಹೋಗಿರುವ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಶಿಥಿಲ ವ್ಯವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ಭದ್ರಗೊಳಿಸುವ ಸಲುವಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

 ಹಾನಿ ಆಗಿರುವ ಶಾಲೆಗಳ ವಿವರ

ಮಳೆಯಿಂದ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ 18 ಶಾಲೆಗಳ 24 ಕೊಠಡಿ, ಬಾಗೇಪಲ್ಲಿ ತಾಲೂಕಿನಲ್ಲಿ 64 ಶಾಲೆಗಳ 118 ಕೊಠಡಿ, ಚಿಂತಾಮಣಿ ತಾಲೂಕಿನಲ್ಲಿ 103 ಶಾಲೆಗಳ 157 ಕೊಠಡಿ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 47 ಶಾಲೆಗಳ 64 ಕೊಠಡಿ, ಗೌರಿಬಿದನೂರು ತಾಲೂಕಿನಲ್ಲಿ 26 ಶಾಲೆಗಳ 54 ಕೊಠಡಿ, ಶಿಡ್ಲ ಘಟ್ಟ ತಾಲೂಕಿನಲ್ಲಿ 38 ಶಾಲೆಗಳ 66 ಕೊಠಡಿಗೆ ಹಾನಿಯಾಗಿದೆ ಎಂದು ಇಲಾಖೆ ಅಧಿ ಕಾರಿಗಳು ಪಟ್ಟಿ ತಯಾರಿಸಿಕೊಂಡಿದ್ದಾರೆ.

 “ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ಶಾಲೆಗಳು, ಅದರ ಕೊಠಡಿಗಳ ಮಾಹಿತಿಯನ್ನು ಪ್ರಾಥಮಿಕ ಹಂತದಲ್ಲಿ ಪಡೆದುಕೊಂಡಿದ್ದೇನೆ. ಜಿಲ್ಲೆಯಲ್ಲಿ 296 ಶಾಲೆಗಳ 483 ಕೊಠಡಿಗಳಿಗೆ ಹಾನಿಯಾಗಿದೆ. ಈ ವರದಿಯನ್ನು ಇಲಾಖೆ ಅಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.” – ಕೆ.ಎಂ.ಜಯರಾಮರೆಡ್ಡಿ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

– ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next